ಧಾರವಾಡ: ಅಕಾಲಿಕ ರಭಸದ ಗಾಳಿ, ಭಾರಿ ಮಳೆಯಿಂದಾಗಿ ಮಾವಿನ ಕಾಯಿಗಳು ಉದುರಿದ್ದು, ಧಾರವಾಡ ತಾಲೂಕಿನಲ್ಲಿ ಮಾವು ಬೆಳೆದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು... ಧಾರವಾಡ ನಗರ ಹಾಗೂ ಗ್ರಾಮೀಣ ಭಾಗದ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಮಳೆಯಿಂದ ಮಾವು ಬೆಳೆಗಾರರಿಗೆ ಸಂಕಷ್ಟ ತಂದಿದೆ. ಮಾವಿನ ತೋಟಗಳಲ್ಲಿರುವ ಮರಗಳಿಂದ ಮಿಡಿಕಾಯಿ ಉದುರಿವೆ. ಪ್ರತಿ ಗಿಡದಿಂದ ಸರಾಸರಿ 20-30 ಕಾಯಿಗಳು ಉದುರಿರುವುದು ಬೆಳೆಗಾರರಿಗೆ ಭೀತಿ ಮೂಡಿಸಿದೆ. ಹವಾಮಾನ ತಜ್ಞರ ಅಂದಾಜಿನಂತೆ ಇನ್ನೂ ಕೆಲ ದಿನ ಮಳೆ ಸುರಿಯುವ ಸಾಧ್ಯತೆಯಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಸಾಲಸೂಲ ಮಾಡಿ ಮಕ್ಕಳಂತೆ ಪೋಷಿಸಿದ್ದರಿಂದ ಮಾವಿನ ಗಿಡಗಳು ಹೂವು ಚೆನ್ನಾಗಿ ಬಿಟ್ಟಿದ್ದವು. ಗಿಡಗಳು ಹೆಚ್ಚು ಮಿಡಿಕಾಯಿ ಬಿಟ್ಟು ಈ ಬಾರಿ ಉತ್ತಮ ಇಳುವರಿ ನಿರೀಕ್ಷೆ ಹೆಚ್ಚಿಸಿತ್ತು. ಅಕಾಲಿಕ ಗಾಳಿ ಹಾಗೂ ಮಳೆಯಿಂದಾಗಿ ಮಾವು ಬೆಳೆ ಹಾನಿಯಾಗಿದೆ. ಅಕ್ಷರಶಃ ಮಾವು ಬೆಳೆಯುವ ರೈತರ ಬಾಳಿಗೆ ಒಣ ಸಿಡಿಲು ಬಡಿದಂತಾಗಿದೆ.
ಧಾರವಾಡ ತಾಲೂಕಿನಲ್ಲಿ ರಭಸದ ಗಾಳಿ, ಗುಡುಗು ಸಹಿತ ಮಳೆ ಸುರಿದಿದ್ದರಿಂದ ಮಾವಿನ ಗಿಡದ ಮಿಡಿಕಾಯಿಗಳು ಉದುರಿವೆ. ಪೌಷ್ಟಿಕಾಂಶಗಳ ಕೊರತೆ ಕೂಡ ಕಾಯಿ ಉದುರುವಿಕೆಗೆ ಕಾರಣವಾಗಿದೆ. ಗಾಳಿಯನ್ನು ತಡೆದುಕೊಳ್ಳುವ ಶಕ್ತಿ ಕಾಯಿಯ ತೊಟ್ಟಿನಲ್ಲಿರದಿರುವುದು ಕೂಡ ಕಾಯಿ ಉದುರಲು ಕಾರಣವಾಗಿದೆ. ಒಂದು ವೇಳೆ ಆಲಿಕಲ್ಲು ಮಳೆ ಸುರಿದರೆ ಇದು ಗಿಡದಲ್ಲಿರುವ ಕಾಯಿಗಳನ್ನು ಹಾಳು ಮಾಡುತ್ತದೆ. ಹುಳ-ಕೀಟಗಳ ಬಾಧೆ ಹೆಚ್ಚಾಗುವುದರಿಂದ ಕಾಯಿಗಳ ಬೆಳವಣಿಗೆಯಲ್ಲಿಯೂ ಸಮಸ್ಯೆ ಆಗುತ್ತದೆ. ಅಲ್ಲದೇ ಕಾಯಿ ದೊಡ್ಡ ಗಾತ್ರದಲ್ಲಿ ಬೆಳೆದರೂ ಒಳಗೆ ಕೀಟಗಳು ಆಕ್ರಮಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಇಳುವರಿ ಕಡಿಮೆಯಾಗುವಂತಾಗಿರುವುದು ಮಾವು ಬೆಳೆದ ರೈತರ ಆತಂಕವನ್ನು ಹೆಚ್ಚಿಸಿದೆ. ರೈತರಿಗೆ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಮಾವು ಬೆಳೆದ ರೈತರಿಗೆ ಸರ್ಕಾರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿಶೇಷ ವರದಿ: ಮಂಜುನಾಥ ಕವಳಿ ಪಬ್ಲಿಕ್ ನೆಕ್ಸ್ಟ್ ಧಾರವಾಡ
Kshetra Samachara
21/03/2026 07:39 pm