ಹುಬ್ಬಳ್ಳಿ: ಬೆಣ್ಣೆ ಹಳ್ಳ ಹೆಸರಿನಲ್ಲಿ ಮಾತ್ರವೇ ಬೆಣ್ಣೆ ಆದರೆ, ಮಳೆ ಬಂದರೆ ರೈತರ ಪಾಲಿಗೆ ಹುಣ್ಣಾಗಿ, ಎಲ್ಲರನ್ನೂ ಅಕ್ಷರಶಃ ಕಣ್ಣೀರು ಹಾಕಿಸುತ್ತದೆ. ಇಂತಹದೊಂದು ಕಣ್ಣೀರಿನ ಹಳ್ಳಕ್ಕೆ ಸರ್ಕಾರ 200 ಕೋಟಿ ಬಿಡುಗಡೆ ಮಾಡಿ ದೊಡ್ಡ ಕಾರ್ಯಕ್ರಮ ಮಾಡಿದೆ. ಆದರೆ ರೈತರ ಬೇಡಿಕೆ ಬೆಟ್ಟದಷ್ಟು, ಕೊಟ್ಟಿದ್ದು, ಸಾಸಿವೆಯಷ್ಟು ಎಂಬುವಂತಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ಬೆಣ್ಣೆಹಳ್ಳ. ಇದೇ ಬೆಣ್ಣೆಹಳ್ಳದ ಯೋಜನೆಗೆ ಮೊದಲನೇ ಹಂತದಲ್ಲಿ ಸರ್ಕಾರ 200 ಕೋಟಿ ರೂಪಾಯಿ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಿದೆ. ಆದರೆ ಈ ಭಾಗದ ರೈತರು ಬೆಣ್ಣೆ ಹಳ್ಳದಿಂದ ಆಗುವ ಅನಾಹುತಗಳನ್ನು ಶಾಶ್ವತವಾಗಿ ಪರಿಹರಿಸುವ ಕಾರ್ಯವನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹೌದು.. ಫೆ.8ರಂದು ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದು, ಪ್ರತಿ ಸಾರಿ ಮಳೆಯಾದಾಗ ಧಾರವಾಡ ಜಿಲ್ಲೆಯ ಬೆಣ್ಣೆ ಹಳ್ಳದಿಂದ ಜನರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ರೈತಾಪಿ ವರ್ಗಕ್ಕೆ ಈ ಹಳ್ಳ ಶಾಪವಾಗಿ ಪರಿಣಮಿಸಿದೆ.
ಕೊಟ್ಟಿರುವ 200 ಕೋಟಿ ನವಲಗುಂದ ಕ್ಷೇತ್ರಕ್ಕೆ ಮಾತ್ರವೇ ನೀಡಿದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೈಟ್: ಹೇಮನಗೌಡ್ರ(ರೈತರು)ಇನ್ನೂ ಶಾಶ್ವತ ಪರಿಹಾರ ಒದಗಿಸಬೇಕೆಂದು ಹಲವು ವರ್ಷದಿಂದ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಜನರು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು ಪಬ್ಲಿಕ್ ನೆಕ್ಸ್ಟ್ ನಿರಂತರ ವರದಿ ಪ್ರಸಾರ ಮಾಡಿದ್ದ ಬೆನ್ನಲ್ಲೇ 200 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಈಗ ರೈತರು ಶಾಶ್ವತ ಪರಿಹಾರಕ್ಕೆ 3000 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಬೆಣ್ಣೆ ಹಳ್ಳದ ಅನಾಹುತಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ನಿರಂತರವಾಗಿ ವಿಸ್ತೃತವಾದ ವರದಿ ಮಾಡಿತ್ತು. ಇಲ್ಲಿನ ಜನರ ಸಮಸ್ಯೆಗಳನ್ನ ಎಳೆಎಳೆಯಾಗಿ ರಾಜ್ಯದ ಜನರ ಮುಂದೆ ಬಿಚ್ಚಿಟ್ಟಿತ್ತು. ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಎಚ್ಚೆತ್ತ ಸಿದ್ದರಾಮಯ್ಯನವರ ಸರ್ಕಾರ 200 ಕೋಟಿ ರೂಪಾಯಿ ಅನುದಾನದಲ್ಲಿ ಶಂಕುಸ್ಥಾಪನೆ ಮಾಡಿದ್ದು, ಈಗ ಸರ್ಕಾರ ರೈತರ ಮತ್ತಷ್ಟು ಬೇಡಿಕೆಯನ್ನು ಆಲಿಸುವ ಕಾರ್ಯ ಮಾಡಬೇಕಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/03/2026 02:21 pm