ಧಾರವಾಡ: ಕಳೆದ 11 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಅನಿರೀಕ್ಷಿತವಾಗಿ ಆಲಿಕಲ್ಲು ಮಳೆ ಆಗಿದ್ದು, ಇದರಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ಆಗಿರುವ ಬಗ್ಗೆ ವರದಿಯಾಗಿದೆ ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಖುದ್ದಾಗಿ ಹಾಗೂ ಎಲ್ಲಾ ತಾಲೂಕುಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ಜರುಗಿಸಿ ಅವರು ಮಾತನಾಡಿದರು.
ಕಳೆದ 2015ರ ಮಾರ್ಚ್‌ನಲ್ಲಿ ಅನಿರೀಕ್ಷಿತ ಮಳೆಯಾಗಿತ್ತು. ಈಗ 11 ವರ್ಷಗಳ ನಂತರ ಮಾರ್ಚ್ ತಿಂಗಳಲ್ಲಿ ಮತ್ತೆ ಮಳೆ ಆಗಿದೆ. ಆಲಿಕಲ್ಲು ಮಳೆಯಿಂದ ವಿಶೇಷವಾಗಿ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮ ಸುತ್ತಮುತ್ತ ಸುಮಾರು 5 ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರು ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ ಸ್ಥಳ ಭೇಟಿ ನೀಡಿ ಅಧಿಕಾರಿಗಳು ಹಾನಿ ಪ್ರದೇಶ ಅಂದಾಜಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ರೈತರಿಂದ ಅಥವಾ ಫಲಾನುಭವಿಗಳಿಂದ ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆಯಿಂದ, ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಲಘಟಗಿಯಲ್ಲಿ ಅಂದಾಜು 205 ಎಕರೆ ಮಾವು ಸೇರಿದಂತೆ ಸುಮಾರು 450 ಎಕರೆ ಪ್ರದೇಶದಲ್ಲಿ ಮಾವು, ಬಾಳೆ, ತರಕಾರಿ ಬೆಳೆಗಳಿಗೆ ಹಾನಿ ಆಗಿದೆ ಎಂದು ಕಲಘಟಗಿ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಜಂಟಿ ಸಮೀಕ್ಷೆ ಮಾಡಿ, ನಿಖರವಾದ ವರದಿ ಸಲ್ಲಿಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚನೆ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 09:10 pm