ಅಣ್ಣಿಗೇರಿ : ಕುರುಬ ಸಮಾಜದ ಬಹುದಿನದ ಬೇಡಿಕೆಯಾಗಿದ್ದ ಶಲವಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ನಿರ್ಮಾಣಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಶಾಸಕ ಕೋನರಡ್ಡಿ ಅವರ ಮನವಿಗೆ ಸ್ಪಂದಿಸಿ 50 ಲಕ್ಷ ರೂ. ಅನುದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಲಾಯಿತು. ಈ ಕುರಿತು ಮಾತನಾಡಿದ ಶಾಸಕ ಕೋನರಡ್ಡಿ, ಈ ಕೆಲಸ ನೆರವೇರುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಬಹುದಿನದ ಕನಸು ನನಸು
ಶುಕ್ರವಾರ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮುದಾಯ ಭವನ ಹಾಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಕೋನರಡ್ಡಿ, "ಶಲವಡಿ ಗ್ರಾಮ ನನ್ನ ತಾಯಿಯ ತವರೂರು. ಇಲ್ಲಿ ಹುಟ್ಟಿ ಬೆಳೆದ ನಾನು ಈ ಊರಿನ ಮೊಮ್ಮಗನಾಗಿದ್ದು, ಈ ಗ್ರಾಮದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ. ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೆಲ್ಲಾ ನೀವು ನನಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದದಿಂದ ವಿಧಾನಸಭೆಗೆ ಹೋಗಿ ಇಂತಹ ಅನುದಾನಗಳನ್ನು ತಂದು ಜನಸೇವೆ ಮಾಡಲು ಅವಕಾಶ ಸಿಕ್ಕಿದೆ" ಎಂದರು.
ಅವರು ಮುಂದುವರಿದು, "ಸಮುದಾಯ ಭವನ ನಿರ್ಮಿಸಲು 2013-18ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿಯೇ ಜಮೀನು ಖರೀದಿಸಲಾಗಿತ್ತು. ಅದಕ್ಕೆ ಸಮಾಜದ ಮುಖಂಡರು ಹಾಗೂ ಅಣ್ಣಿಗೇರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ದೇವಪ್ಪ ರೋಣದ ಅವರ ಸಹಾಯದಿಂದ ಎರಡು ಎಕರೆ ಜಮೀನು ಖರೀದಿಸಲು ಸಾಧ್ಯವಾಯಿತು. ಈಗ ಅದರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸರ್ವಧರ್ಮದ ಸಾರ್ವಜನಿಕರ ಅನುಕೂಲಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸುತ್ತಿರುವುದು ನನಗೆ ನಿಜಕ್ಕೂ ಹೆಮ್ಮೆಯ ವಿಷಯ" ಎಂದು ಹೇಳಿದರು. ನಂತರ ಯುಗಾದಿ ಪ್ರಯುಕ್ತ ನಡೆಯುವ ಬಸವೇಶ್ವರ ದೇವಸ್ಥಾನದ ಪ್ರವಚನ ಕಾರ್ಯಕ್ರಮ ಹಾಗೂ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಗುರುಗಳಾದ ಕೆ.ಬಿ. ಕಳ್ಳಿಮನಿ ಅವರಿಂದ ಆಶೀರ್ವಾದ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರುಶಾಂತೇಶ್ವರ ಮಠದ ಪೂಜ್ಯ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು, ವಿರಕ್ತಮಠದ ಬಸವಲಿಂಗ ಮಹಾಸ್ವಾಮಿಗಳು, ತುಪ್ಪದಕುರಹಟ್ಟಿ ಗ್ರಾಮದ ಷ.ಬ್ರ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಭೂಸನೂರ ಮಠದ ಪೂಜ್ಯ ಶ್ರೀಗಳ ಸಾನಿಧ್ಯವಿತ್ತು. ಹಿರಿಯರಾದ ದೇವಪ್ಪ ರೋಣದ, ವಿ.ಸಿ. ಪಾಟೀಲ, ಉಮೇಶ ಶಿರೋಳ, ಅರುಣ ಮಜ್ಜಗಿ, ಮಲ್ಲಿಕಾರ್ಜುನ ಹಳ್ಳಿ, ಶ್ರೀನಿವಾಸ ಮರಡ್ಡಿ, ಶಾಂತಪ್ಪ ಕುರಹಟ್ಟಿ, ಮಾಂತೇಶ ವಗ್ಗರ, ಎಸ್.ಎಫ್. ನಡುವಿನಹಳ್ಳಿ, ವೀರಣ್ಣ ಹುರಕಡ್ಲಿ, ಶಾಂತವ್ವ ಪೂಜಾರ, ಶ್ರೀಶೈಲ ಬಸವರಡ್ಡಿ, ಗುರುಶಾಂತಪ್ಪ ಬಸಾಪೂರ, ದುಂಡಯ್ಯ ಸೇರಿದಂತೆ ಮುಂತಾದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 07:42 pm