ಮಂಗಳೂರು: ನಗರದ ಅಡ್ಡೂರು ನಿವಾಸಿ ಕ್ಯಾಟರಿಂಗ್ ಉದ್ಯಮಿ ಅಬೂಬಕ್ಕರ್ ಅಲಿಯಾಸ್ ಪುತ್ತರಿಗೆ ಕಂಬಳ ಕೋಣಗಳ ಕ್ರೇಜ್ ಇದೆ. ಕಂಬಳ ಕೋಣಗಳ ಪ್ರೀತಿ ಅವರನ್ನೀಗ ಹೊಸ ಪ್ರಯೋಗದತ್ತ ಕರೆದೊಯ್ದಿದೆ. ಈ ಪ್ರಯೋಗ ಇದೀಗ ಗ್ರಾಮಸ್ಥರಿಗೂ ಉಪಯೋಗವಾಗುತ್ತಿದೆ.
ಪುತ್ತ ಅವರ ತಂದೆಯ ಕಾಲದಿಂದಲೂ ಅವರ ಮನೆಯಲ್ಲಿ ಕಂಬಳ ಕೋಣಗಳನ್ನು ಸಾಕಲಾಗುತ್ತಿದೆ. ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಕಂಬಳ ಯಜಮಾನರಿಗೆ ಕೋಣಗಳನ್ನು ನೀಡುವ ಮೂಲಕ ಹೆಸರು ಗಳಿಸಿದ್ದಾರೆ. ಕೋಣಗಳನ್ನು ಸಾಕುವುದು ಕೇವಲ ಉದ್ಯೋಗವಲ್ಲ, ಅವರ ಬದುಕಿನ ಭಾಗ. ಸದ್ಯ ಕಂಬಳ ಕೋಣ ಸಾಕಲು ಹುಲ್ಲಿನ ಕೊರತೆ ಸಮಸ್ಯೆಯಾಗಿ ತಲೆದೋರಿದೆ. ತಮ್ಮ ಊರಿನ ಸುತ್ತಮುತ್ತ ಮೇವು ಸಿಗದೆ, ನದಿಯಾಚೆಯ ಪ್ರದೇಶದಿಂದ ಹುಲ್ಲು ತರಬೇಕಾದ ಪರಿಸ್ಥಿತಿ ಎದುರಾಯಿತು. ಅಲ್ಲಿಗೆ ಹೋಗಲು ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೆ ಕಷ್ಟವಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪುತ್ತ ಅವರು ಸ್ವತಃ ದೋಣಿ ನಿರ್ಮಿಸುವ ನಿರ್ಧಾರಕ್ಕೆ ಬಂದರು. ಫೈಬರ್ ಸಾಮಗ್ರಿಯನ್ನು ತಂದು, ಅದನ್ನು ತುಂಡುಗಳಾಗಿ ಕತ್ತರಿಸಿ ಜೋಡಿಸಿ ಒಂದು ದೋಣಿಯನ್ನು ನಿರ್ಮಿಸಿದರು. ದೋಣಿಗೆ ಅಗತ್ಯವಾದ ಇಂಜಿನ್ ಅನ್ನು ಎರ್ನಾಕುಲಂನಿಂದ ತರಿಸಿಕೊಂಡು ಅಳವಡಿಸಿದರು. ಈ ಪ್ರಕ್ರಿಯೆ ಅವರಿಗೆ ಕಷ್ಟಕರವಾಗಿದ್ದರೂ, ಕೊನೆಗೆ ಯಶಸ್ವಿಯಾಗಿ ದೋಣಿಯನ್ನು ಸಿದ್ಧಪಡಿಸಲು ಸಾಧ್ಯವಾಯಿತು.
ಇದೀಗ ಈ ದೋಣಿ ಕೇವಲ ಕಂಬಳ ಕೋಣಗಳಿಗೆ ಹುಲ್ಲು ತರಲು ಮಾತ್ರ ಸೀಮಿತವಾಗಿಲ್ಲ. ನದಿಯಾಚೆಗೆ ಹೋಗಬೇಕಾದ ಗ್ರಾಮಸ್ಥರಿಗೆ ಇದು ಪ್ರಮುಖ ಸಂಪರ್ಕ ಸಾಧನವಾಗಿದೆ. ಯಾರಾದರೂ ಆ ಕಡೆಗೆ ಹೋಗಬೇಕಾದರೆ, ಪುತ್ತ ಅವರಿಗೆ ಕರೆ ಮಾಡಿದರೆ ಅವರು ತಕ್ಷಣ ದೋಣಿಯನ್ನು ತೆಗೆದುಕೊಂಡು ಹೋಗಿ ಜನರನ್ನು ಉಚಿತವಾಗಿ ದಾಟಿಸುವ ಸೇವೆ ನೀಡುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸ್ವಪ್ರಯತ್ನದಿಂದ ಪರಿಹಾರ ಕಂಡುಕೊಂಡ ಪುತ್ತ ಅವರ ಕಾರ್ಯ ಮಾದರಿಯೆನಿಸಿದೆ. ಅವರ ಈ ಸಾಧನೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.
PublicNext
24/03/2026 11:07 am
LOADING...