ಮಡಿಕೇರಿ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗವು ಬಹುಭಾಷೆ ಮತ್ತು ಬಹುಸಂಸ್ಕೃತಿ ಒಳಗೊಂಡಿರುವ ಪ್ರದೇಶವಾಗಿದೆ. ಆ ದಿಸೆಯಲ್ಲಿ ನಾಡಿನ ಭಾಷೆ ಜೊತೆಗೆ ಅರೆಭಾಷೆ ಸೇರಿದಂತೆ ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ತಿಳಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇವರ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅರೆಭಾಷೆ ವಿಚಾರ ಸಂಕಿರಣ ಮತ್ತು ಪದ ಕಟ್ಟುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಬಹುಭಾಷೆ ಮತ್ತು ಬಹುಸಂಸ್ಕೃತಿ ಇರುವುದನ್ನು ಕಾಣಬಹುದಾಗಿದೆ. ನಾಡಿನ ಭಾಷೆಯ ಜೊತೆಗೆ ಹಲವು ಸ್ಥಳೀಯ ಭಾಷೆ ಕಾಣಬಹುದಾಗಿದೆ ಎಂದು ಹೇಳಿದರು. ಬಹುದೊಡ್ಡ ಭಾಷೆಯಾದ ಕನ್ನಡ ಭಾಷೆಯ ಜೊತೆಗೆ ಸಣ್ಣ ಸಣ್ಣ ಸ್ಥಳೀಯ ಭಾಷೆಗಳನ್ನು ಸಹ ಉಳಿಸಬೇಕು. ಆ ನಿಟ್ಟಿನಲ್ಲಿ ಅರೆಭಾಷೆಗೆ ತನ್ನದೇ ಆದ ವೈವಿದ್ಯಮಯ ಭಾಷಾ ಶ್ರೀಮಂತಿಕೆ ಇದ್ದು, ಅದನ್ನು ಉಳಿಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಕರೆ ನೀಡಿದರು.
ಅರೆಭಾಷೆಯನ್ನು ಕೊಡಗು ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಮಾತನಾಡುವ ಪ್ರದೇಶವಾಗಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ 22 ಭಾಷೆಗಳು ಇದ್ದು, ಇವುಗಳಲ್ಲಿ ಉತ್ತರ ಭಾರತದ 18 ಭಾಷೆಗಳು ಹಾಗೂ ದಕ್ಷಿಣದ ನಾಲ್ಕು ಭಾಷೆಗಳು ಸಂವಿಧಾನ 8 ನೇ ಪರಿಚ್ಛೇದದಲ್ಲಿ ಸೇರಿವೆ ಎಂದು ಪ್ರೊ.ಅಶೋಕ್ ಸಂಗಪ್ಪ ಆಲೂರ ತಿಳಿಸಿದರು.
PublicNext
27/03/2026 07:09 am