ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ​ವಿದ್ಯುತ್ ತಂತಿ ಸ್ಪರ್ಶ; ಚಿಪ್ಸ್ ಲೋಡ್ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಬೆಂಕಿಗಾಹುತಿ

​ಹಗರಿಬೊಮ್ಮನಹಳ್ಳಿ: ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸಲು ರೈತರು ಅಳವಡಿಸಿದ್ದ ವಿದ್ಯುತ್ ವಯರ್ ತಗುಲಿದ ಪರಿಣಾಮ, ಲಕ್ಷಾಂತರ ರೂಪಾಯಿ ಮೌಲ್ಯದ ಚಿಪ್ಸ್ ಪ್ಯಾಕೆಟ್‌ಗಳನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ವಾಹನವೊಂದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಲ್ಲೋಬನಹಳ್ಳಿ ಗ್ರಾಮದ ಬಳಿ ನಡೆದಿದೆ.

​ಬೆಂಗಳೂರಿನಿಂದ ಹಡಗಲಿ ಪಟ್ಟಣಕ್ಕೆ ಚಿಪ್ಸ್ ಬಾಕ್ಸ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಈ ಕ್ಯಾಂಟರ್ ಲಾರಿಗೆ ಪಿಲ್ಲೋಬನಹಳ್ಳಿ ಬಳಿ ವಿದ್ಯುತ್ ತಂತಿ ತಗುಲಿದೆ. ಹೊಲಗಳಿಗೆ ವಿದ್ಯುತ್ ಪೂರೈಸಲು ರೈತರು ಅಳವಡಿಸಿದ್ದ ವಯರ್ ಲಾರಿಯ ಮೇಲ್ಭಾಗಕ್ಕೆ ಸ್ಪರ್ಶಿಸಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.

​​ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸದ ಚಾಲಕ, ವಾಹನವನ್ನು ನೂರಾರು ಮೀಟರ್‌ಗಳವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ವಾಹನದ ಹಿಂಭಾಗದಲ್ಲಿ ಬೆಂಕಿಯ ಕೆನ್ನಾಲಿಗೆ ಕಂಡುಬಂದಾಗ, ಹಾದಿಹೋಕರು ಮತ್ತು ಸ್ಥಳೀಯರು ಕಿರುಚಾಡಿ ಸನ್ನೆ ಮಾಡುವ ಮೂಲಕ ಚಾಲಕನ ಗಮನ ಸೆಳೆದಿದ್ದಾರೆ. ಕೂಡಲೇ ಚಾಲಕ ವಾಹನವನ್ನು ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

​ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಇಡೀ ಕ್ಯಾಂಟರ್ ಹಾಗೂ ಅದರಲ್ಲಿದ್ದ ಚಿಪ್ಸ್ ಪ್ಯಾಕೆಟ್‌ಗಳು ಧಗಧಗ ಹೊತ್ತಿ ಉರಿದಿವೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರಾದರೂ, ಅಷ್ಟೊತ್ತಿಗಾಗಲೇ ವಾಹನ ಮತ್ತು ಸರಕು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Shivu K
PublicNext

PublicNext

27/03/2026 09:10 pm

Cinque Terre

20.33 K

Cinque Terre

0