ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ, ದೂರಿನಲ್ಲಿ ಭದ್ರಾವತಿಯ 3 ಸ್ನೇಹಿತರ ಹೆಸರು ಉಲ್ಲೇಖ

ಶಿವಮೊಗ್ಗ : ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದ ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜು ಉಪನ್ಯಾಸಕ ಸುರೇಶ್‌.ಹೆಚ್‌.ಆರ್‌ (55) ಅವರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಘಟನೆ ಸಂಬಂಧ ಪೊಲೀಸರು ಕೊಲೆಯ ಸಂಶಯದಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನು, ಪ್ರಕರಣದ ಕುರಿತು ಮೃತ ಸುರೇಶ್‌ ಅವರ ಪತ್ನಿ ನಾಗರತ್ನ ದೂರು ನೀಡಿದ್ದಾರೆ.

ಶಿವಮೊಗ್ಗದ ವಿನೋಬನಗರದ ಕಲ್ಲಳ್ಳಿಯಲ್ಲಿ ಕುಟುಂಬದೊಂದಿಗೆ ಸುರೇಶ್ ವಾಸವಿದ್ದರು.

ಮಾರ್ಚ್ 28ರಂದು ಬೆಳಗ್ಗೆ ಮನೆಯಿಂದ ಹೊರಟಿದ್ದ ಸುರೇಶ್‌, 'ಭದ್ರಾವತಿಯ ಮೂವರು ಸ್ನೇಹಿತರ ಜೊತೆಗೆ ತುಮಕೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೇನೆ, ನಾಳೆ ಸಂಜೆ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾರ್ಚ್ 29ರ ಬೆಳಗ್ಗೆ ಸುರೇಶ್‌ ಅವರ ಅಣ್ಣನ ಮಗ ಮಧು, ನಾಗರತ್ನ ಅವರಿಗೆ ಕರೆ ಮಾಡಿ ತೋಟದಲ್ಲಿನ ಘಟನೆ ಕುರಿತು ತಿಳಿಸಿದ್ದಾರೆ. ನಾಗರತ್ನ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಸುರೇಶ್ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಶವದ ಪಕ್ಕದಲ್ಲೇ ಅವರ ಬ್ಯಾಗ್, ಮೊಬೈಲ್, ಫೋಟೋ ಇದ್ದ ಪರ್ಸ್ ಹಾಗೂ ಅವರ ಬೈಕ್ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎರಡು ವರ್ಷದ ಹಿಂದೆ ಸುರೇಶ್ ಅವರ ಸಹೋದರಿ ಕಮಲಮ್ಮ ಹಾಗೂ ಇತ್ತೀಚೆಗೆ ಆತ್ಮೀಯ ಸ್ನೇಹಿತ ಹಾಲೇಶ್ ಅವರ ನಿಧನದಿಂದ ಸುರೇಶ್ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು. ಅವರು ಯಾವಾಗಲೂ ಮಂಕಾಗಿರುತ್ತಿದ್ದರು. ಅಲ್ಲದೆ ಮಾತು ಕೂಡ ಕಡಿಮೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತುಮಕೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಸುರೇಶ್‌ ಅವರು ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಅವರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪತ್ನಿ ನಾಗರತ್ನ ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By :
PublicNext

PublicNext

31/03/2026 11:47 am

Cinque Terre

11.29 K

Cinque Terre

0

ಸಂಬಂಧಿತ ಸುದ್ದಿ