ಮಂಗಳೂರು: ಗಾಂಜಾ ಸಾಗಾಟ ಪ್ರಕರಣದಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ತ್ವರಿತ ನ್ಯಾಯಾಲಯ ಲಕ್ಷದ್ವೀಪದ ಕಿಲ್ತಾನ್ ಐಲ್ಯಾಂಡ್ ನಿವಾಸಿ ಸಲಾಹುದ್ದೀನ್ (28) ಗೆ 6 ತಿಂಗಳ ಕಠಿನ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಸಬಾ ಗ್ರಾಮದ ಹಳೇ ಬಂದರು ದಕ್ಕೆಯಲ್ಲಿ 2020ರ ಜ.30ರಂದು ಅಕ್ರಮವಾಗಿ ಮಾದಕ ದ್ರವ್ಯ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಲಕ್ಷದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣಿಸಲು ಪ್ರಯತ್ನಿಸುತ್ತಿರುವಾಗ ಸಲಾಹುದ್ದೀನ್ ನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ಬಂಧಿಸಿದ್ದರು. ಆತನ ಬ್ಯಾಗಿನಲ್ಲಿ 100 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯನ್ನು ಬಿಡುಗಡೆಗೊಳಿಸಿತ್ತು. ಆದೇಶದ ವಿರುದ್ಧ ಅಭಿಯೋಜನೆ ಮೇಲ್ಮನವಿ ಸಲ್ಲಿಸಿದ್ದು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ಅಭಿಯೋಜನೆಯ ಹಾಗೂ ಆತನ ಪರ ವಾದ ವಿವಾದವನ್ನು ಆಲಿಸಿದೆ, ಇದರಲ್ಲಿ ಆತನ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ1 ತ್ವರಿತ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮೋಹನ್ ಜೆ.ಎಸ್. ಅವರು ಗುರುವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. 6 ತಿಂಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
Kshetra Samachara
03/04/2026 03:30 pm