ನವದೆಹಲಿ: ಚಿತ್ರರಂಗದಲ್ಲಿ ಕೆಲಸ ಮಾಡುವ, ನಟಿಯಾಗುವ ಆಸೆ ಹಲವು ಯುವತಿಯರಿಗಿದೆ. ಆದರೆ, 'ಕಾಸ್ಟಿಂಗ್ ಕೌಚ್' ಎಂಬ ಪೆಡಂಭೂತ ಅದೆಷ್ಟೋ ಪ್ರತಿಭಾವಂತ ಯುವತಿಯರ ಕನಸುಗಳನ್ನು ಭಗ್ನಗೊಳಿಸುತ್ತಿದೆ. ಇದರ ವಿರುದ್ಧ ಹೋರಾಟಗಳು, ಕಾನೂನು ಕಟ್ಟಳೆಗಳು ಜಾರಿಯಲ್ಲಿದ್ದರೂ, ಈ ಪಿಡುಗು ಸಂಪೂರ್ಣವಾಗಿ ನಿಂತಿಲ್ಲ. ಇತ್ತೀಚೆಗೆ, ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವತಿಯೊಬ್ಬರು ತಮಗೆ ಟಾಲಿವುಡ್‌ನಲ್ಲಿ ಎದುರಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ದು ಮಾಡುತ್ತಿದೆ.
‘ಪೀಕು ನೆಮಿಲಿ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋಗಳನ್ನು ಹಂಚಿಕೊಂಡಿರುವ ಈ ಯುವತಿ, ತೆಲುಗು ಚಿತ್ರರಂಗದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಸ್ವತಃ ವಿವರಿಸಿದ್ದಾರೆ. ಅಲ್ಲದೆ, ಇಂತಹ ಅಸುರಕ್ಷಿತ ಮತ್ತು ಭಯದ ವಾತಾವರಣ ಇರುವ ಕಾರಣದಿಂದಲೇ ಅನೇಕ ಯುವತಿಯರು ಚಿತ್ರರಂಗಕ್ಕೆ ಬರಲು ಹಿಂಜರಿಯುತ್ತಾರೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಯುವತಿ ಹೇಳುವ ಪ್ರಕಾರ, ಅವರಿಗೆ ಕೆಲವು ಸ್ನೇಹಿತರಿಂದ ಸಹಾಯಕ ನಿರ್ದೇಶಕರ ನಂಬರ್‌ಗಳು ಸಿಕ್ಕಿದ್ದವು. ಅದರಲ್ಲಿ ಒಬ್ಬರೊಂದಿಗೆ ಮಾತನಾಡಿದಾಗ, ಅವರು ತಮ್ಮ ‘ಪೋರ್ಟ್‌ಫೋಲಿಯೊ’ ಕಳುಹಿಸಲು ಕೇಳಿದರು. ಅದರಂತೆ ಯುವತಿ ತಮ್ಮ ಚಿತ್ರಗಳನ್ನು ತೆಗೆಸಿಕೊಂಡು ಕಳುಹಿಸಿದರು. ನಂತರ ಆ ವ್ಯಕ್ತಿ ಕರೆ ಮಾಡಿ, ‘ನೀವು ‘ಕಮಿಟ್‌ಮೆಂಟ್’ ಕೊಡುತ್ತೀರಾ?’ ಎಂದು ಕೇಳಿದ್ದಾನೆ. ನಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಯುವತಿ, ‘ಹೌದು, ನಾನು ಬಹಳ ಕಮಿಟ್‌ಮೆಂಟ್ ಇರುವ ಯುವತಿ, ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾಗಿ ವಿವರಿಸಿದ್ದಾರೆ.
ಆದರೆ, ಆ ವ್ಯಕ್ತಿಯ ನಿಜವಾದ ಉದ್ದೇಶ ಬೇರೆಯೇ ಇತ್ತು. ಆತ ಮತ್ತೆ ಕರೆ ಮಾಡಿ, ಒಬ್ಬ ಜನಪ್ರಿಯ ನಿರ್ಮಾಪಕ ತಮ್ಮನ್ನು ಭೇಟಿ ಮಾಡಲು ಸಿದ್ಧರಿದ್ದಾರೆ, ಒಂದು ರೆಸಾರ್ಟ್‌ನಲ್ಲಿ ಭೇಟಿ ನಿಗದಿಪಡಿಸಿದ್ದೇನೆ, ತಕ್ಷಣ ಫ್ಲೈಟ್ ಹತ್ತಿ ಬನ್ನಿ ಎಂದು ಹೇಳಿದ್ದಾನೆ. ಅಲ್ಲದೆ, ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ 'ಸಮಯ ಕಳೆಯಬೇಕು' ಎಂದು ಸಹ ಸೂಚಿಸಿದ್ದಾನೆ. ಆತನ ದುರುದ್ದೇಶವನ್ನು ಅರಿತ ತಕ್ಷಣ ಯುವತಿ ಕರೆ ಕಡಿತಗೊಳಿಸಿ, ಆ ವ್ಯಕ್ತಿಯನ್ನು ಬ್ಲಾಕ್ ಮಾಡಿದ್ದಾರೆ. ಬೇರೆ ಬೇರೆ ಸಂಖ್ಯೆಗಳಿಂದ ಆತ ಮತ್ತೆ ಕರೆ ಮಾಡಿದಾಗಲೂ, ಯುವತಿ ಆತನನ್ನು ನಿರ್ದಾಕ್ಷಿಣ್ಯವಾಗಿ ಬ್ಲಾಕ್ ಮಾಡುತ್ತಲೇ ಇದ್ದಾರೆ.
ಸದ್ಯ ಈ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೆಲುಗು ಚಿತ್ರರಂಗದ ಹಿರಿಯ ನಟಿ ಜಾನ್ಸಿ ಸಹ ಈ ವಿಡಿಯೋಗೆ ಕಾಮೆಂಟ್ ಮಾಡಿ, ತೆಲುಗು ಚಿತ್ರರಂಗದ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಈ ಸಮಿತಿಯ ಸದಸ್ಯೆಯಾಗಿರುವ ಜಾನ್ಸಿ, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆಯನ್ನು ಯುವತಿಗೆ ನೀಡಿದ್ದಾರೆ. ಆದರೆ, ಈ ಬಗ್ಗೆ ಯುವತಿ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ವರದಿಯಾಗಿದೆ.
PublicNext
03/04/2026 03:57 pm