ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ಆರೋಪಿಸಿರುವ ಎಐ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಜೆಪಿ ಹರಿಬಿಟ್ಟ ಈ ವಿಡಿಯೋದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಬಸ್ಸಿನಲ್ಲಿ ನಿರ್ವಾಹಕರಾಗಿ (ಕಂಡಕ್ಟರ್) ಕಾಣಿಸಿಕೊಂಡರೆ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಚಾಲಕರಾಗಿ (ಡ್ರೈವರ್) ಬಸ್ ಚಲಾಯಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಯಾಣಿಕರಿಂದ ಟಿಕೆಟ್ ಪಡೆಯಲು ಮುಂದಾದಾಗ, ಮಹಿಳೆಯೊಬ್ಬಳು 'ನನ್ನದು ಫ್ರೀ' ಎಂದು ಹೇಳುತ್ತಾಳೆ. ನಂತರ, ಮಹಿಳೆಯ ಪಕ್ಕದಲ್ಲಿ ಕುಳಿತಿದ್ದ ಪುರುಷನಿಗೆ ಸಿಎಂ ೫೦ ರೂಪಾಯಿ ಕೊಡುವಂತೆ ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆ ಪುರುಷ, "ಸರ್, ನನ್ನ ಟಿಕೆಟ್ ಕೇವಲ ೨೫ ರೂಪಾಯಿ ಅಲ್ಲವೇ?" ಎಂದು ಪ್ರಶ್ನಿಸುತ್ತಾನೆ. ಆಗ ಸಿಎಂ, "ಮಹಿಳೆಯರಿಗೆ ಫ್ರೀ ಮಾಡಿದ್ದೇವೆ, ಅದಕ್ಕೆ ನಿಮಗೆ ಡಬಲ್. ಜಾಸ್ತಿ ಮಾತಾಡಬೇಡ, ದುಡ್ಡು ಕೊಡು" ಎಂದು ಹೇಳುತ್ತಾರೆ. ಇದಕ್ಕೆ ಆ ಪುರುಷ ಅಸಮಾಧಾನದಿಂದ, "ಬರೀ ದೋಚೋದೆ ಆಯ್ತು" ಎಂದು ಗೊಣಗುತ್ತಾನೆ. ವಿಡಿಯೋದ ಕೊನೆಯಲ್ಲಿ, ಚಾಲಕರಾಗಿದ್ದ ಸಚಿವ ರಾಮಲಿಂಗ ರೆಡ್ಡಿ "ಬಸ್ ಕೆಟ್ಟು ಹೋಗಿದೆ, ಕೆಳಗಿಳಿದು ತಳ್ಳಿ" ಎಂದು ಹೇಳಿದಾಗ, ಪ್ರಯಾಣಿಕರು ಬಸ್ ತಳ್ಳುತ್ತಾ "ಏನು ಗ್ರಹಚಾರವಿದು!" ಎಂದು ಆಕ್ರೋಶ ವ್ಯಕ್ತಪಡಿಸುವುದು ಕಂಡುಬರುತ್ತದೆ.
PublicNext
03/04/2026 03:58 pm