ಶಿವಮೊಗ್ಗ : ಇನ್ನೊಂದು ತಿಂಗಳಲ್ಲಿ ಹೊಸನಗರಕ್ಕೆ 110 ಕೆ.ವಿ. ಸ್ಥಾವರ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೊಸನಗರದ ಮೆಸ್ಕಾಂ ಇಲಾಖೆಯ ಮುಂದೆ ಅಥವಾ ತಾಲ್ಲೂಕು ಕಚೇರಿಯ ಮುಂದೆ ಗಂಜಿ ಕೇಂದ್ರ ತೆರೆದು ಒಂದೊಂದು ಗ್ರಾಮದ ಗ್ರಾಮಸ್ಥರಿಂದ ಹೋರಾಟ ನಡೆಸುತ್ತೇವೆ ಎಂದು ಸಹಕಾರ ಒಕ್ಕೂಟದ ಸದಸ್ಯ ದುಮ್ಮ ವಿನಯ್‌ಕುಮಾರ್ ಹೇಳಿದರು.
ಮಾವಿನಕೊಪ್ಪದಿಂದ ಹೊಸನಗರ ತಾಲ್ಲೂಕು ಕಚೇರಿಯವರೆಗೆ 110 ಕೆ.ವಿ. ವಿದ್ಯುತ್ ಸ್ಥಾಪಿಸಬೇಕೆಂದು ಹೊಸನಗರ ತಾಲ್ಲೂಕು ಸಹಕಾರಿ ಒಕ್ಕೂಟದಿಂದ ಹೋರಾಟ ಹಮ್ಮಿಕೊಂಡಿದ್ದು ತಹಸೀಲ್ದಾರ್ ಭರತ್‌ರಾಜ್‌ರಿಗೆ ಹಾಗೂ ಮೆಸ್ಕಾಂ ಇಂಜಿನಿಯರ್ ಚಂದ್ರಶೇಖರ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಯೋಜನೆಗೆ ಅನೇಕ ಗ್ರಾಮಗಳು ಮುಳುಗಡೆ ಆಗಿ ಜಮೀನು ಕಳೆದುಕೊಂಡು ಸಾವಿರಾರು ರೈತ ಕುಟುಂಬಗಳು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಹೊಸನಗರ ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದು ಇನ್ನೂ ಕೂಡ ಕತ್ತಲೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ಆರು ದಶಕಗಳ ಹೆಚ್ಚು ಕಾಲದಲ್ಲಿ ವಿದ್ಯುತ್ತಿಗಾಗಿ ಭೂಮಿ ಕಳೆದುಕೊಂಡು ಪುನರ್ ವಸತಿಯನ್ನೂ ಸಹ ಕಲ್ಪಿಸದೇ ಹಾಗೂ ವಿದ್ಯುತ್ ಸಂಪರ್ಕವೂ ಸಹ ಸಮರ್ಪಕವಾಗಿ ಇಲ್ಲದೇ ಈ ತಾಲ್ಲೂಕಿನಲ್ಲಿ ಜನ ಜೀವನದ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದ್ದು ಸರ್ಕಾರದಿಂದ ವಿದ್ಯುತ್ ಪೂರೈಕೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ದಿನನಿತ್ಯದ ಬಳಕೆಯ ವಿದ್ಯುತ್ ಸರಿಯಾದ ಪ್ರಮಾಣದಲ್ಲಿ ಇಲ್ಲದೇ ವಿದ್ಯಾರ್ಥಿಗಳಿಗೆ ರಾತ್ರಿ ಹೊತ್ತಿನಲ್ಲಿ ಓದಲು ತೊಂದರೆಯಾಗುತ್ತಿದೆ ಹಾಗೂ ಗೃಹಬಳಕೆಯ ವಸ್ತು ಮಿಕ್ಸಿ, ಗ್ರೈಂಡರ್ ಚಾಲನೆ ಕಷ್ಟವಾಗಿರುತ್ತದೆ. ರೈತರ ಪಂಪ್‌ಸೆಟ್ ಬಳಕೆಗೆ ವಿದ್ಯುತ್ ವೋಲ್ಟೇಜ್ ಇಲ್ಲದೇ ಬಹಳ ತೊಂದರೆಯಾಗುತ್ತಿದ್ದು, ಉದ್ಯಮಿಗಳಿಗೆ ಉದ್ಯಮ ನಡೆಸಲು ಸಹ ವಿದ್ಯುತ್ ಇಲ್ಲದೆ ಬಹಳ ತೊಂದೆರೆಯಾಗುತ್ತಿದ್ದು ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಕೂಡಲೇ ವಿದ್ಯುತ್ ಸ್ಥಾವರ 110 ಕೆ.ವಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
PublicNext
05/04/2026 11:07 am