ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಕಿಚ್ಚು ತಾರಕಕ್ಕೇರಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹರತಾಳು ಹಾಲಪ್ಪ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದರು.
‘ಬಾಡಿಗೆ ಹಣದಲ್ಲಿ ಫ್ಲೆಕ್ಸ್ ಹಾಕಿಸುವ ದುರ್ಗತಿ ನಮಗಿಲ್ಲ’ ಮಾರಿಜಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯ ಬಾಡಿಗೆ ಹಣವನ್ನು ಫ್ಲೆಕ್ಸ್ ಅಳವಡಿಸಲು ಬಳಸಲಾಗಿದೆ ಎಂಬ ಹಾಲಪ್ಪ ಅವರ ಆರೋಪಕ್ಕೆ ತಿರುಗೇಟು ನೀಡಿದ ಚಂದ್ರಪ್ಪ, "ನಮ್ಮ ಶಾಸಕರಿಗೆ ಪಕ್ಷದ ಕಚೇರಿಯ ಬಾಡಿಗೆ ಹಣದಲ್ಲಿ ಫ್ಲೆಕ್ಸ್ ಹಾಕಿಸುವಂತಹ ದುರ್ಗತಿ ಬಂದಿಲ್ಲ. ಸುಳ್ಳು ಆರೋಪಗಳ ಮೂಲಕ ಶಾಸಕರ ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು" ಎಂದು ಎಚ್ಚರಿಸಿದರು.
ಬ್ಯಾಕೋಡು-ತುಮರಿ ಪಾದಯಾತ್ರೆಯ ಸಂದರ್ಭದಲ್ಲಿ ಹಾಲಪ್ಪ ಮಾಡಿರುವ ಎಲ್ಲಾ ಆರೋಪಗಳು ಕೇವಲ ರಾಜಕೀಯ ಪ್ರೇರಿತ.
"ಒಂದು ರಾಷ್ಟ್ರೀಯ ಪಕ್ಷವಾಗಿದ್ದರೂ ಸಾಗರ ಕ್ಷೇತ್ರದಲ್ಲಿ ಬಿಜೆಪಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಇಂತಹ ಸ್ಥಿತಿಯಲ್ಲಿರುವ ಹಾಲಪ್ಪ ಅವರಿಗೆ ಕಾಂಗ್ರೆಸ್ ಕಚೇರಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ" ಎಂದು ಲೇವಡಿ ಮಾಡಿದರು.
ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಹಾಲಪ್ಪನವರು ಕನಿಷ್ಠ ಸತ್ಯಾಸತ್ಯತೆ ಅರಿತು ಮಾತನಾಡಲಿ ಎಂದು ಕಿವಿಮಾತು ಹೇಳಿದರು.
"ವಿರೋಧ ಪಕ್ಷವಾಗಿ ಬಿಜೆಪಿ ಪ್ರತಿಭಟನೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕರ ದಾರಿ ತಪ್ಪಿಸುವ ಸುಳ್ಳು ಸುದ್ದಿಯನ್ನು ಹಬ್ಬಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು."
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಸೋಮಶೇಖರ ಲ್ಯಾವಿಗೆರೆ, ಎಲ್.ಚಂದ್ರಪ್ಪ, ಎನ್.ಲಲಿತಮ್ಮ, ಚೇತನರಾಜ್ ಕಣ್ಣೂರು, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಡಿ.ದಿನೇಶ್, ಕೆ.ಹೊಳೆಯಪ್ಪ, ಕನ್ನಪ್ಪ ಹಾಗೂ ಮಕ್ಬೂಲ್ ಅಹಮದ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಸಾಗರದ ರಾಜಕೀಯ ಅಖಾಡದಲ್ಲಿ ಈಗ ಆರೋಪ-ಪ್ರತ್ಯಾರೋಪಗಳ ಪರ್ವ ಶುರುವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
Kshetra Samachara
04/04/2026 05:41 pm