ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆಯನೂರು, ಹೊಳಲೂರು ಮತ್ತು ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ಮರು ವರ್ಗಾವಣೆ ಆದೇಶ ಮಾಡಲು ಕೂಡಲೇ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಜನತಾದಳ ವತಿಯಿಂದ ಶಾಸಕಿ ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿ ಡಿಸಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವಿಸ್ತೀರ್ಣದಲ್ಲಿ ದೊಡ್ಡ ಮತಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅತೀ ಹಿಂದುಳಿದ ವರ್ಗದ ಜನಾಂಗ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿರುವುದರಿಂದ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ತಾಲ್ಲೂಕು ಆಸ್ಪತ್ರೆ ಇಲ್ಲದೇ ಇರುವುದರಿಂದ ಗರ್ಭೀಣಿಯರು, ಮಕ್ಕಳು, ವಯೋವೃದ್ಧರು ಮತ್ತು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆಯಾದಾಗ ಬಹಳ ತೊಂದರೆಯಾಗುತ್ತಿದೆ. ಹಾಲಿ ಟ್ರೈಯಾಡ್ ಯೋಜನೆ ಆದೇಶದಂತೆ ತಜ್ಞವೈದ್ಯರುಗಳನ್ನು ಸಮುದಾಯ ಆರೋಗ್ಯ ಕೇಂದ್ರದ ಶಿವಮೊಗ್ಗ ತಾಲ್ಲೂಕಿನ ಆಯನೂರು ಮತ್ತು ಹೊಳಲೂರು ಹಾಗೂ ಭದ್ರಾವತಿದ ತಾಲ್ಲೂಕಿನ ಹೊಳೆಹೊನ್ನೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಜ್ಞ ವೈದ್ಯರುಗಳನ್ನು ವರ್ಗಾವಣೆ ಮಾಡಲಾಗಿದ್ದು, ಸದನದಲ್ಲಿ ಮಾ.12ರಂದು ಈ ಬಗ್ಗೆ ಚರ್ಚಿಸಲಾಗಿದೆ. ಚುಕ್ಕೆ ಪ್ರಶ್ನೆಗೆ ಉತ್ತರ ನೀಡಿದ ಮಂತ್ರಿಗಳು ತಾಲ್ಲೂಕು ಆಸ್ಪತ್ರೆಗಳು ಇಲ್ಲದಿರುವ ತಾಲ್ಲೂಕುಗಳಲ್ಲಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲವೆಂದು ಉತ್ತರ ನೀಡಿದ್ದರು. ಆದರೆ ಈಗ ವರ್ಗಾವಣೆ ಮಾಡಲಾಗಿದ್ದು ಇದು ಜನತೆಗೆ ಬಗೆದ ದ್ರೋಹ ಎಂದು ಶಾಸಕಿ ಶಾರದಾ ಪೂರ್‍ಯಾನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ವರ್ಗಾವಣೆ ಮಾಡಲಾದ ತಜ್ಞ ವೈದ್ಯರುಗಳನ್ನು ಮರು ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಮೇಲ್ಕಂಡ ಈ ಮೂರೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು ಮತ್ತು ಸಾಮಾನ್ಯ ವೈದ್ಯಾಽಕಾರಿಗಳನ್ನು ಕೂಡಲೇ ಮರು ವರ್ಗಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Kshetra Samachara
04/04/2026 04:45 pm