ಶಿವಮೊಗ್ಗ : ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಘೋಷಣೆಗೆ ಆಗ್ರಹಿಸಿ ಹೊಸನಗರ ತಾಲೂಕಿನ ನಗರದಿಂದ ರಿಪ್ಪನ್ ಪೇಟೆಯವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆ ಸಭೆಯಲ್ಲಿ ಮಾತನಾಡಿದ ಹೊಸನಗರ ವಿಧಾನಸಭಾ ಕ್ಷೇತ್ರ ಪುನರ್‌ರಚನಾ ಸಮಿತಿ ಅಧ್ಯಕ್ಷ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್‌ಸ್ಥಾಪನೆಗೆ ಬೇಡಿಕೆ ಸಲ್ಲಿಸುವ ಹಕ್ಕು ಇಲ್ಲಿನ ಜನತೆಗಿದೆ. ಮುಳುಗಡೆಯಿಂದ ಬದುಕು ಕಳೆದುಕೊಂಡ ಜನತೆಗೆ ಆಡಳಿತಾತ್ಮಕ ಸುವ್ಯವಸ್ಥೆ ಸಿಗುವಂತಾಗಲು ಪ್ರತ್ಯೇಕ ಕ್ಷೇತ್ರ ರಚನೆಯೇ ಪರಿಹಾರವಾಗಿದೆ,
ಹೊಸನಗರದ ಜನತೆ ಒಂದಲ್ಲಾ ಒಂದು ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಕ್ಷೇತ್ರವನ್ನೂ ಕಳೆದುಕೊಂಡಿದ್ದೇವೆ. ತಾಲೂಕನ್ನು ಇಬ್ಭಾಗ ಮಾಡಿ ಎರಡು ಕ್ಷೇತ್ರಗಳಿಗೆ ಹಂಚಿರುವುದು ಅನ್ಯಾಯ. ಈಗ ಕಾಲ ಕೂಡಿಬಂದಿದೆ. ನಮ್ಮ ಧ್ವನಿ ಗಟ್ಟಿಯಾಗಬೇಕಿದೆ. ಹೊಸನಗರ ವಿಧಾನಸಭಾ ಕ್ಷೇತ್ರ ರಚನೆ ಆಗುವವವರೆಗೂ ಹೋರಾಟದ ನಿರಂತರತೆ ಕಾಪಾಡಿಕೊಳ್ಳಬೇಕಿದೆ. ಸಾರ್ವಜನಿಕರು ಭಿನ್ನ ಭೇದ ಮರೆತು ಪಾಲ್ಗೊಳ್ಳಬೇಕೆಂದು ಅವರು ಕರೆ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 2008ರ ಮೊದಲು ನಡೆದ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿಯೇ ತಮಗೆ ಆಡಳಿತಾತ್ಮಕ ಸಮಸ್ಯೆ ಆಗುವ ಮುನ್ಸೂಚನೆ ಸಿಕ್ಕಿತ್ತು. ತಾವು ಹಾಗೂ ಕಾಗೋಡು ತಿಮ್ಮಪ್ಪ ಹೊಸನಗರ ಕ್ಷೇತ್ರ ರದ್ದುಗೊಳಿಸುವ ತೀರ್ಮಾನವನ್ನು ವಿರೋಧಿಸಿದ್ದೆವು. ಆದರೆ ಅಂದಿನ ಆಯೋಗ ನಮ್ಮ ಅಹವಾಲನ್ನು ಮಾನ್ಯ ಮಾಡಲಿಲ್ಲ. ಕೇಂದ್ರ ಸರಕಾರ ಈಗ ಪುನರ್‌ವಿಂಗಡಣೆಗೆ ಮುಂದಾಗಿದೆ. ವಿಶೇಷ ಲೋಕಸಭಾ ಅಧಿವೇಶನ ಸಹಾ ನಡೆಯಲಿದೆ. ಮತ್ತೊಮ್ಮೆ ಕ್ಷೇತ್ರ ಪುನರ್‌ರಚನೆ ಆಗುವ ವಿಶ್ವಾಸವಿದೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೊಸನಗರ ಕ್ಷೇತ್ರ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಮತವಿದೆ. ಒಂದು ತಾಲೂಕು ಎರಡು ಕ್ಷೇತ್ರಗಳಿಗೆ ಹಂಚಿ ಹೋಗಿರುವುದರಿಂದ ಕೇವಲ ಜನತೆಗಷ್ಟೇ ಅಲ್ಲ, ಆಡಳಿತ ನಡೆಸುವವರಿಗೂ ಸಮಸ್ಯೆಗಳಾಗುತ್ತವೆ ಎಂದರು.
Kshetra Samachara
05/04/2026 04:36 pm