ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ವಂದೇ ಭಾರತ್ ಎಕ್ಸ್‌ಪ್ರೆಸ್ ಊಟದಲ್ಲಿ ಜಿರಳೆ ಪ್ರತ್ಯಕ್ಷ! ಐಆರ್‌ಸಿಟಿಸಿಯಿಂದ ಕೆಟರಿಂಗ್ ಸಂಸ್ಥೆಗೆ 10 ಲಕ್ಷ ರೂ. ದಂಡ

ಮುಂಬೈ: ದೇಶದ ಪ್ರತಿಷ್ಠಿತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಊಟದಲ್ಲಿ ಕೀಟ (ಜಿರಳೆ) ಪತ್ತೆಯಾಗಿದ್ದು, ರೈಲ್ವೆ ಇಲಾಖೆಯ ಆಹಾರದ ಗುಣಮಟ್ಟದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಗಂಭೀರ ಲೋಪವನ್ನು ಪರಿಗಣಿಸಿರುವ ಐಆರ್‌ಸಿಟಿಸಿ (IRCTC), ಸಂಬಂಧಪಟ್ಟ ಆಹಾರ ಪೂರೈಕೆದಾರ ಸಂಸ್ಥೆಗೆ 10 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಿದೆ.

ಅಹಮದಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆದಿತ್ಯ ದಿದ್ವಾನಿಯಾ ಎಂಬ ಪ್ರಯಾಣಿಕರು ತಮಗೆ ನೀಡಲಾದ ಆಹಾರದಲ್ಲಿ ಕೀಟ ಇರುವುದನ್ನು ಗಮನಿಸಿದ್ದಾರೆ. ಇದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣವಾದ 'X' ನಲ್ಲಿ ಹಂಚಿಕೊಂಡಿದ್ದಾರೆ.

"ನನ್ನ ಕೋಚ್‌ನಲ್ಲಿ ಇಂತಹ ಕನಿಷ್ಠ ಎರಡು ಪ್ರಕರಣಗಳು ಕಂಡುಬಂದಿವೆ. ಇದನ್ನು ನೋಡಿದ ಮೇಲೆ ಎಲ್ಲರೂ ಊಟ ಮಾಡುವುದನ್ನೇ ನಿಲ್ಲಿಸಿದರು," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವ ಐಆರ್‌ಸಿಟಿಸಿ, ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ. ಆಹಾರ ಪೂರೈಕೆದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸಂಬಂಧಿತ ಕೆಟರಿಂಗ್ ಸೇವಾ ಪೂರೈಕೆದಾರರಿಗೆ ಗುತ್ತಿಗೆ ರದ್ದತಿ ನೋಟಿಸ್ ನೀಡಲಾಗಿದೆ. ಕೀಟ ಪತ್ತೆಯಾದ ಆಹಾರ ತಯಾರಾದ ಅಡುಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮತ್ತು ಕೀಟನಾಶಕ ಸಿಂಪಡಣೆಗಾಗಿ ಸೀಲ್ ಮಾಡಲಾಗಿದೆ.

ಕಳೆದ ತಿಂಗಳು ಕೂಡ ಮೊಸರಿನಲ್ಲಿ ಹುಳು ಪತ್ತೆಯಾದ ಘಟನೆ ನಡೆದಿತ್ತು. ಈಗ ಮತ್ತೆ ವಂದೇ ಭಾರತ್‌ನಂತಹ ಹೈಟೆಕ್ ರೈಲಿನಲ್ಲಿ ಇಂತಹ ಘಟನೆ ಮರುಕಳಿಸಿರುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. "ನಾವು ಹೆಚ್ಚಿನ ಹಣ ನೀಡಿ ಟಿಕೆಟ್ ಖರೀದಿಸುವುದು ಇಂತಹ ಆಹಾರ ತಿನ್ನಲಿಕ್ಕಲ್ಲ" ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

Edited By : Nagaraj Tulugeri
PublicNext

PublicNext

07/04/2026 06:37 pm

Cinque Terre

24.04 K

Cinque Terre

3

ಸಂಬಂಧಿತ ಸುದ್ದಿ