ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಅನುಮತಿ ನೀಡಲು ನಿರಾಕರಿಸಿದ ಪೊಲೀಸರು

ಧಾರವಾಡ : ವಿದ್ಯಾಕಾಶಿ ಧಾರವಾಡದಲ್ಲಿ ನೂರಾರು ಕೋಚಿಂಗ್ ಸೆಂಟರ್‌ಗಳಿದ್ದು, ಇಲ್ಲಿಗೆ ಕೋಚಿಂಗ್ ಪಡೆಯಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಕೋಚಿಂಗ್ ಪಡೆದ ಸಾವಿರಾರು ಜನ ವಿದ್ಯಾರ್ಥಿಗಳು ಸರ್ಕಾರ ಕರೆಯುವ ಖಾಲಿ ಹುದ್ದೆಗಳಿಗೆ ಅರ್ಜಿ ಹಾಕಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾವುದೇ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿಯೇ ಆಕ್ಸಾ ಎಂಬ ವಿದ್ಯಾರ್ಥಿ ಸಂಘಟನೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ ನೀಡಿತ್ತು.

ಮೊನ್ನೆಯಷ್ಟೇ ಆಕ್ಸಾ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಅವರು ಏಪ್ರಿಲ್ 8 ರಂದು ಮತ್ತೊಂದು ಸುತ್ತಿನ ಹೋರಾಟ ನಡೆಸಲು ತಯಾರಿ ನಡೆಸಿದ್ದರು. ಈ ಸಂಬಂಧ ಅನುಮತಿ ನೀಡುವಂತೆಯೂ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಆದರೆ, ಇವರ ಹೋರಾಟಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಇತ್ತೀಚೆಗೆ ವಿರೋಧ ಪಕ್ಷವಾದ ಬಿಜೆಪಿ ಉದ್ಯೋಗಾಕಾಂಕ್ಷಿಗಳ ಪರ ನಿಂತು ಹೋರಾಟ ಮಾಡಿತ್ತು. ಆದರೆ, ಇದರಲ್ಲಿ ಆಕ್ಸಾ ಸಂಘಟನೆ ಮುಖಂಡ ಕಾಂತಕುಮಾರ್ ತಾವೇ ಈ ಪ್ರತಿಭಟನೆಯ ಮುಂದಾಳತ್ವ ವಹಿಸಿ ಹೋರಾಟ ಮಾಡಿದ್ದರು. ಈಗ ಇದೇ ಆಕ್ಸಾ ಸಂಘಟನೆ ಹೆಸರಿನಲ್ಲೇ ಮತ್ತೊಂದು ಸುತ್ತಿನ ಉದ್ಯೋಗಾಕಾಂಕ್ಷಿಗಳ ಹೋರಾಟ ನಡೆಸಲು ನಿರ್ಧರಿಸಿ ಪೊಲೀಸರ ಅನುಮತಿ ಕೇಳಿದ್ದರು. ಪೊಲೀಸರು ಮಾತ್ರ ಇವರ ಹೋರಾಟಕ್ಕೆ ಅನುಮತಿ ನೀಡಿಲ್ಲ. ಈ ಸಂಘಟನೆಯವರೂ ಕೂಡ ಕಾನೂನು ಪ್ರಕಾರ ಅನುಮತಿ ಪಡೆದುಕೊಂಡೇ ಹೋರಾಟ ನಡೆಸುತ್ತೇವೆ. ನಾಳೆಯ ಪ್ರತಿಭಟನೆ ಕೈಬಿಡುತ್ತೇವೆ ಎಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ನಾವೂ ಕೂಡ ಬಂದೋಬಸ್ತ್ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಆಕ್ಸಾ ಸಂಘಟನೆ ಏಪ್ರಿಲ್ 8 ರಂದು ಹೋರಾಟ ನಡೆಸಲು ನಿರ್ಧರಿಸಿತ್ತು. ಈ ಸಂಘಟನೆಗೆ ಪರ್ಯಾಯವಾಗಿ ಮತ್ತೊಂದು ವಿದ್ಯಾರ್ಥಿ ಸಂಘಟನೆ ಏಪ್ರಿಲ್ 14 ರಂದು ಇದೇ ಉದ್ದೇಶ ಇಟ್ಟುಕೊಂಡು ಹೋರಾಟ ನಡೆಸಲು ನಿರ್ಧರಿಸಿದೆ. ಯಾರೇ ಪ್ರತಿಭಟನೆ ಮಾಡಿದರೂ ಅದಕ್ಕೆ ಪೊಲೀಸರ ಪೂರ್ವಾನುಮತಿ ಕಡ್ಡಾಯ. ಅನುಮತಿ ಇಲ್ಲದೆಯೇ ಹೋರಾಟ ನಡೆಸಿದರೆ ಕಾನೂನು ರೀತಿಯ ಕ್ರಮ ಆಗಲಿದೆ. ನಾಳೆ ಮಾತ್ರ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ ಉದ್ಯೋಗಾಕಾಂಕ್ಷಿಗಳ ಪರ ಈಗ ಒಂದಲ್ಲ ಎರಡೆರಡು ಸಂಘಟನೆಗಳು ಹೋರಾಟಕ್ಕೆ ನಿಂತಿದ್ದು, ಸದ್ಯಕ್ಕಂತೂ ಯಾವ ಸಂಘಟನೆಗಳಿಗೂ ಹೋರಾಟಕ್ಕೆ ಅನುಮತಿಯನ್ನು ಪೊಲೀಸರು ನೀಡಿಲ್ಲ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 08:59 pm

Cinque Terre

12.89 K

Cinque Terre

0

ಸಂಬಂಧಿತ ಸುದ್ದಿ