ಮಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಮಂಗಳೂರಿನ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಚೇರಿಯಲ್ಲಿ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್. ಎಂಬಾತನ ಮನೆ ಕಚೇರಿಗೆ ಲೋಕಾಯುಕ್ತ ದಾಳಿ ಮಾಡಿದೆ.
ಈತ ತನ್ನ ಸೇವಾ ಅವಧಿಯಲ್ಲಿ ನ್ಯಾಯಬದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಪೊಲೀಸ್ ನಿರೀಕ್ಷಕ ನೀಡಿದ ಚಂದ್ರಶೇಖರ್ ಕೆ.ಎನ್ ಮಾಹಿತಿಯ ಮೇರೆಗೆ ಮಾ.6ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.7ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಒಟ್ಟು ಆರು ಮಂದಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡಗಳ ಬಾಬು ಬಿ.ಎನ್. ರವರಿಗೆ ಸಂಬಂಧಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಟೌನ್‌ನಲ್ಲಿರುವ ವಾಸದ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳು, ಬೆಂಗಳೂರು ನಗರದಲ್ಲಿನ ಫ್ಲಾಟ್ ಮತ್ತು ವಾಸದ ಮನೆಗಳು, ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಹಾಗೂ ಕರ್ತವ್ಯ ನಿರ್ವಹಿಸುವ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಈ ವೇಳೆ ಬಾಬು ಬಿ.ಎನ್.ರವರಿಗೆ ಸಂಬಂಧಿಸಿದ ಒಟ್ಟು 3,37,04,000 ರೂ. ಮೌಲ್ಯದ ಸ್ಥಿರಮತ್ತು ಚರಾಸ್ತಿಗಳು ಪತ್ತೆಯಾಗಿದೆ. ಬಾಬು ಬಿ.ಎನ್.ಗೆ ಸೇರಿದ ಬೆಂಗಳೂರಿನ ವಾಸದ ಮನೆಯಲ್ಲಿ 23,64,000 ನಗದು ಹಾಗೂ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ದೊರೆತಿದೆ.
ಈ ದಾಳಿ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಡಿ.ವೈ.ಎಸ್.ಪಿ ಡಾ. ಗಾನ ಪಿ ಕುಮಾರ್ ಮತ್ತು ಸುರೇಶ್ ಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ, ಭಾರತಿ ಜಿ, ಶಿವರಾಜ್‌ಕುಮಾರ್, ರಾಜೇಂದ್ರ ನಾಯ್ಕ್ ಹಾಗೂ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಲೋಕಾಯುಕ್ತ ಘಟಕಗಳ ಪೊಲೀಸ್ ಸಿಬ್ಬಂದಿ ಭಾಗವಹಿಸಿರುತ್ತಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
PublicNext
07/04/2026 11:28 pm
LOADING...