ಮಂಗಳೂರು: ಒಂದೆಡೆ ಬಿಸಿಲ ಝಳ, ಇನ್ನೊಂದೆಡೆ ಹೆಚ್ಚುತ್ತಿರುವ ನೀರಿನ ಬೇಡಿಕೆ. ಪರಿಣಾಮ ಇಡೀ ಮಂಗಳೂರು ನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ನೀರು ಪೂರೈಸುತ್ತಿರುವ ತುಂಬೆ ವೆಂಟೆಡ್ ಡ್ಯಾಮ್‌ನ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಸೆಕೆಯಿದ್ದು, ನದಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ನೀರಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಂಬೆ ವೆಂಟೆಡ್ ಡ್ಯಾಂನಿಂದ ನಿರಂತರ ಪಂಪಿಂಗ್ ಕಾರ್ಯ ನಡೆಯುತ್ತಿದೆ. ಸದ್ಯ ತುಂಬೆ ಡ್ಯಾಂನ ಒಳಹರಿವು ಸ್ಥಗಿತಗೊಂಡಿದ್ದು, ನೀರಿನ ಮಟ್ಟ ಸೋಮವಾರ ಸಂಜೆ 5.75 ಮೀಟರ್‌ಗೆ ಇಳಿಕೆಯಾಗಿದೆ.
ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಭಾಗದಲ್ಲಿ ವಾರದಿಂದೀಚೆಗೆ ಭಾರಿ ಮಳೆಯಾಗುತ್ತಿದೆ. ಆದರೆ ಮಳೆಯ ನೀರಿನ್ನೂ ತುಂಬೆ ಡ್ಯಾಂಗೆ ಬಂದಿಲ್ಲ. ಉಪ್ಪಿನಂಗಡಿ ಸರಳೀಕಟ್ಟೆ ಡ್ಯಾಂ, ಎಎಂಆರ್ ಡ್ಯಾಂ ಮತ್ತು ಜಕ್ರಿಬೆಟ್ಟು ಡ್ಯಾಂನಲ್ಲಿ ನೀರು ಭರ್ತಿಯಾಗಿವೆ. ಮೇಲ್ಭಾಗದಲ್ಲಿ ಉತ್ತಮ ಮಳೆಯಾದರೆ ಮಾತ್ರ ಈ ಡ್ಯಾಂಗಳು ಭರ್ತಿಯಾಗಿ, ಕೆಳಭಾಗಕ್ಕೆ ನೀರು ಬಿಡಲಾಗುತ್ತಿದೆ. ಮಳೆ ಮುಂದುವರಿದರೆ ಮಾತ್ರ ತುಂಬೆ ಡ್ಯಾಂನ ನೀರಿನ ಮಟ್ಟ ಏರಿಕೆಯಾಗಲಿದೆ.
ಮಂಗಳೂರು ಮಹಾನಗರದ ಪಾಂಡೇಶ್ವರ, ಕಂದಕ್, ನೀರೇಶ್ವಾಲ್ಯ, ಸುರತ್ಕಲ್, ಕೂಳೂರು, ಕೋಡಿಕಲ್, ಆಕಾಶಭವನ, ಕಾಟಿಪಳ್ಳ, ಕೃಷ್ಣಾಪುರದ ಕೆಲವು ಭಾಗಗಳಲ್ಲಿ ಈಗಾಗಲೇ ನೀರಿನ ಸಮಸ್ಯೆಯಿದೆ. ಮುಂಗಾರು ಪೂರ್ವ ಮಳೆ ಬಿರುಸಾಗಿ ಬಾರದಿದ್ದರೆ ಈಗ ಸಂಗ್ರಹವಾಗಿರುವ ನೀರನ್ನು ಇನ್ನು 2 ತಿಂಗಳ ಕಾಲ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಕಳೆದ ಬಾರಿ ಮೇ ಮಧ್ಯಭಾಗದಿಂದಲೇ ಉತ್ತಮ ಮಳೆ ಬಂದ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಈಗಾಗಲೇ ನೀರಿನ ಮಟ್ಟ ಕಡಿಮೆಯಾಗುತ್ತಿದೆ.
ಮಂಗಳೂರು ನಗರಕ್ಕೆ ಪ್ರತಿನಿತ್ಯ 162ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಇದೇ ರೀತಿ ಬಿಸಿಲು ಮುಂದುವರಿದು ಮುಂಗಾರು ಪೂರ್ವ ಮಳೆ ಬಾರದಿದ್ದರೆ ನೀರಿನ ಆತಂಕ ತಪ್ಪಿದ್ದಲ್ಲ. ಆದ್ದರಿಂದ ನಾಗರಿಕರು ನೀರನ್ನು ಮಿತವಾಗಿ ಬಳಸಿ ಮುಂಜಾಗ್ರತೆ ವಹಿಸಬೇಕಾಗಿದೆ.
PublicNext
07/04/2026 07:46 am