ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಹೆಚ್ಚಾದ ಕಾಡಾನೆ ಹಾವಳಿ - ಆತಂಕದಲ್ಲೇ ದಿನಕಳೆಯುತ್ತಿರುವ ಗ್ರಾಮೀಣ ಜನತೆ

ಬೆಳ್ತಂಗಡಿ: ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಕೃಷಿ ತೋಟಗಳು, ಮನೆಗಳ ಸುತ್ತ ಸಂಚರಿಸುತ್ತ ಹಾನಿ ಮಾಡುತ್ತಿದ್ದ ಕಾಡಾನೆಗಳು ಇದೀಗ ವಾಹನಗಳನ್ನು ಜಖಂಗೊಳಿಸುತ್ತಿರುವುದು ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆಲ ದಿನಗಳ ಹಿಂದೆ ಮನೆಯೊಂದರ ಗೇಟ್ ಮುರಿದು, ಕೃಷಿ ಭೂಮಿಗೆ ಹಾನಿ ಮಾಡಿದ ಕಾಡಾನೆ ರವಿವಾರ ರಾತ್ರಿ ಕಾಡಾಂಡ ಪ್ರದೇಶದಲ್ಲಿ ಕಾಣಿಸಿಕೊಂಡು ಕಾರು, ಬೈಕ್ ಹಾಗೂ ಕೃಷಿ ಭೂಮಿಗೆ ಹಾನಿ ಮಾಡಿದೆ.‌

ಕಡಬ, ಸುಳ್ಯ ಭಾಗಗಳಲ್ಲೂ ಕಾಡಾನೆ ಹಾವಳಿ ಮೇರೆ ಮೀರಿದೆ. ಮಾ.28ರಂದು ತೆಂಕುಬೈಲು ಪ್ರದೇಶದಲ್ಲಿ ನಡೆದ ಘಟನೆಯಲ್ಲಿ, ತೋಟದ ಕಾರ್ಮಿಕನಿಗೆ ಸೇರಿದ ಮಾರುತಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಭಾರಿ ಹಾನಿಗೊಳಿಸಿದೆ. ಮಾ.29ರಂದು ಮುಂಡೂರುಪಳಿಕೆ ಸಮೀಪದ ಸಂಕುಬೈಲು ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೂ ಹಾನಿ ಉಂಟಾಗಿದೆ. ಮಾತ್ರವಲ್ಲದೇ ಹಲವಾರು ಜನರು ಕಾಡಾನೆ ನೋಡಿ ಹೆದರಿ ವಾಹನ ಸಮೇತ ಬಿದ್ದು ಗಾಯಗೊಂಡಿದ್ದಾರೆ.

ಬಾಳೆ, ತೆಂಗು, ಅಡಿಕೆ ಮತ್ತು ಭತ್ತದ ಕೃಷಿ ಭೂಮಿಗಳಿಗೆ ಕಾಡಾನೆಗಳು ನುಗ್ಗಿ ಅಪಾರ ನಷ್ಟ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಾನೆಗಳ ಚಲನವಲನವನ್ನು ನಿಯಂತ್ರಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದ್ದು, ಸುಮಾರು 25 ಸದಸ್ಯರ ತಂಡ ಸ್ಥಳದಲ್ಲೇ ಶಿಬಿರ ಹೂಡಿ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ.

ಸ್ಥಳೀಯರು ತುರ್ತು ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ನಿರಂತರ ಪಹರೆ, ಕಾಡಾನೆಗಳ ಚಲನವಲನ ನಿಯಂತ್ರಣ ಮತ್ತು ಮಾನವ-ಆನೆ ಸಂಘರ್ಷ ತಡೆಗೆ ಸಮಗ್ರ ಯೋಜನೆ ಅಗತ್ಯವಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಅರಣ್ಯ ಇಲಾಖೆ ಕೂಡ ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಲು ಮನವಿ ಮಾಡಿದೆ.

Edited By : Vinayak Patil
PublicNext

PublicNext

06/04/2026 04:53 pm

Cinque Terre

15.18 K

Cinque Terre

0

ಸಂಬಂಧಿತ ಸುದ್ದಿ