ಬ್ರಹ್ಮಾವರ: ಕಳೆದ ಹಲವು ವರ್ಷಗಳಿಂದ ನದಿ ಪಾತ್ರದಲ್ಲಿ ಹೂಳು ತುಂಬಿ, ಮಳೆಗಾಲದಲ್ಲಿ ಕೃಷಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆತಂಕ ತರುತ್ತಿದ್ದ ಬಾರಕೂರು ಸಮೀಪದ ನಾಗರಮಠ ಮರಳು ದಿಬ್ಬ ತೆರವುಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತದ ಸೂಚನೆಯಂತೆ ಚಾಲನೆ ನೀಡಲಾಗಿದೆ.
ಬಾರಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಾಳ ಗ್ರಾಮದ ಸರ್ವೆ ನಂಬರ್ 10 ಮತ್ತು 111ರ ವ್ಯಾಪ್ತಿಯಲ್ಲಿ ಹರಿಯುವ ಸೀತಾ ನದಿಯ ನಾಗರಮಠ ಎಂಬಲ್ಲಿ ಸುಮಾರು 8.90 ಎಕರೆ ಸರ್ಕಾರಿ ಪ್ರದೇಶದಲ್ಲಿ ಮರಳು ದಿಬ್ಬ ಶೇಖರಣೆಗೊಂಡಿತ್ತು. ಇದರಿಂದ ನದಿ ತಿರುವು ಪಡೆಯುವ ಜಾಗದಲ್ಲಿ ನೀರಿನ ಸರಾಗ ಹರಿವಿಗೆ ಅಡ್ಡಿಯಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಉಡುಪಿ ಜಿಲ್ಲಾಡಳಿತವು ಡಿಸೆಂಬರ್ 11, 2025 ರಂದು ಟೆಂಡರ್ ಪ್ರಕ್ರಿಯೆ ನಡೆಸಿತ್ತು.
ಕಾರ್ಯಾಚರಣೆಯ ವಿವರ:
ಪರವಾನಿಗೆದಾರರು ಕುಶ ಕುಮಾರ್ (ಬಿಡ್ಡುದಾರರು).
ಪರವಾನಿಗೆ ಅವಧಿ 5 ವರ್ಷಗಳು.
ಒಟ್ಟು ಮರಳು ಗಣಿ ಇಲಾಖೆ ಗುರುತಿಸಿದಂತೆ ಸುಮಾರು 62 ಸಾವಿರ ಮೆಟ್ರಿಕ್ ಟನ್.
ಈ ತೆರವು ಕಾರ್ಯದಿಂದ ಜಿಲ್ಲೆಯಲ್ಲಿ ಮರಳಿನ ಕೊರತೆ ನೀಗಲಿದ್ದು, ನಿರ್ಮಾಣ ಕಾಮಗಾರಿಗಳಿಗೆ ಅಲ್ಪ ಪ್ರಮಾಣದ ಅನುಕೂಲವಾಗಲಿದೆ.
ಮರಳು ದಿಬ್ಬ ತೆರವಿನ ಕಾರ್ಯ ಆರಂಭವಾಗುತ್ತಿದ್ದಂತೆಯೇ, ಪರಿಸರ ಸಂರಕ್ಷಣೆ ಮತ್ತು ನದಿ ಸವೆತದ ನೆಪವೊಡ್ಡಿ ಸ್ಥಳೀಯ ಕೆಲವು ವ್ಯಕ್ತಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಕಾಮಗಾರಿಗೆ ಅಡ್ಡಿಯುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪರವಾನಿಗೆದಾರರು ಪೊಲೀಸ್ ರಕ್ಷಣೆ ಕೋರಿದ್ದರು.
ಪ್ರಸ್ತುತ ಜಿಲ್ಲಾ ಮೀಸಲು ಪೊಲೀಸ್ ಪಡೆಯ (DAR) ಬಿಗಿ ಭದ್ರತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಯಾವುದೇ ಅಡೆತಡೆಯಿಲ್ಲದೆ ಮರಳು ತೆರವು ಕಾರ್ಯ ನಡೆಯುತ್ತಿದೆ. ವಾಹನಗಳ ಸಂಚಾರಕ್ಕಾಗಿ ಸ್ಥಳೀಯರೊಂದಿಗೆ 5 ವರ್ಷಗಳ ಒಡಂಬಡಿಕೆ ಮಾಡಿಕೊಂಡು ರಸ್ತೆ ನಿರ್ಮಿಸಲಾಗಿದೆ. ಈ ಕಾರ್ಯಾಚರಣೆಯು ಮುಂದಿನ 2 ತಿಂಗಳ ಕಾಲ ಸತತವಾಗಿ ನಡೆಯುವ ನಿರೀಕ್ಷೆಯಿದೆ.
"ಜಿಲ್ಲಾಡಳಿತದ ಎಲ್ಲಾ ನಿಯಮಗಳನ್ನು ಪಾಲಿಸಿ, ಕಾನೂನುಬದ್ಧವಾಗಿ ನಾವು ಈ ದಿಬ್ಬ ತೆರವು ಕಾರ್ಯವನ್ನು ಮಾಡುತ್ತಿದ್ದೇವೆ. ನದಿ ಹರಿವಿಗೆ ಅಡ್ಡಿಯಾಗಿರುವ ಹೂಳನ್ನು ತೆಗೆಯುವುದರಿಂದ ಮಳೆಗಾಲದಲ್ಲಿ ಕೃಷಿಕರಿಗೆ ಆಗುವ ತೊಂದರೆ ತಪ್ಪಲಿದೆ" ಎಂದು ಬಿಡ್ಡುದಾರರಾದ ಕುಶ ಕುಮಾರ್ ತಿಳಿಸಿದ್ದಾರೆ.
PublicNext
07/04/2026 01:38 pm