ಮಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಕಾರಣದಿಂದ ಗ್ಯಾಸ್‌ಗೆ ಸಂಬಂಧಿಸಿದ ತತ್ವಾರ ಮುಂದುವರೆದಿದ್ದು, ಮುಖ್ಯವಾಗಿ ಗ್ಯಾಸ್ ಸಂಯೋಜಿತ ಅಟೋ ರಿಕ್ಷಾಗಳನ್ನು ಅವಲಂಬಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಬಳಸಿಕೊಂಡು ಗ್ಯಾಸ್ ಪಂಪ್‌ಗಳಲ್ಲೂ ನಿಯಮ ಮೀರಿ ದರ ವಸೂಲಿ ಮಾಡುತ್ತಿರುವುದರ ವಿರುದ್ಧ ಪುತ್ತೂರು ನಗರದಲ್ಲಿ ಸೋಮವಾರ ಅಟೋ ರಿಕ್ಷಾ ಚಾಲಕರು ಪ್ರತಿಭಟಿಸಿದ ಘಟನೆ ನಡೆಯಿತು.
ನಗರದ ಮುಖ್ಯರಸ್ತೆಯ ಮಹಿಳಾ ಪೊಲೀಸ್ ಠಾಣೆ ಬಳಿಯ ಕಾನ್ಫಿಡೆನ್ಸ್ ಗ್ಯಾಸ್ ಲಿಮಿಟೆಡ್ ಪ್ರವರ್ತಿತ ಗೋ ಗ್ಯಾಸ್ ಹೆಸರಿನ ಗ್ಯಾಸ್ ಬಂಕ್‌ನಲ್ಲಿ ಸೋಮವಾರ ಗ್ಯಾಸ್‌ಗೆ ರೂ.120 ದರ ನಿಗದಿ ಮಾಡಲಾಗಿತ್ತು. ಸಮೀಪದ ಇತರ ಗ್ಯಾಸ್ ಬಂಕ್‌ಗಳಲ್ಲಿ ರೂ. 97 ಕ್ಕೆ ಗ್ಯಾಸ್ ಲಭಿಸುತ್ತಿದ್ದು, ಇಲ್ಲಿ ಏಕಾಏಕಿ ದರ ಏರಿಸಿ ವಂಚಿಸಲಾಗುತ್ತಿದೆ. ಈ ಬಂಕ್‌ನಲ್ಲಿ 3 ನೇ ಬಾರಿಗೆ ದರ ಏರಿಕೆ ಮಾಡಲಾಗುತ್ತಿದೆ ಎಂದು ಅಟೋ ರಿಕ್ಷಾ ಚಾಲಕರು ಬಂಕ್ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ದಿನದಿಂದ ದಿನಕ್ಕೆ ಅಟೋ ರಿಕ್ಷಾ ಅವಲಂಬಿತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಇದರಿಂದ ದಿನ ದೂಡುವುದೇ ಕಷ್ಟಕರವಾಗಿದೆ. ಈ ಮಧ್ಯೆ ಗ್ಯಾಸ್ ಪಂಪ್‌ಗಳಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಬರಬೇಕು. ಒಂದು ವೇಳೆ ಗ್ಯಾಸ್‌ಗೆ ದರ ಈ ಮಟ್ಟದಲ್ಲಿ ಏರಿಕೆ ಮಾಡಲಾಗಿದ್ದರೆ ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ತೋರಿಸಿ ಎಂದು ಪ್ರತಿಭಟನಾಕಾರರನ್ನು ಆಗ್ರಹಿಸಿದರು.
ಗ್ಯಾಸ್ ಬಂಕ್ ಬಂದ್
ರಸ್ತೆ ಬದಿ ಅಟೋ ಚಾಲಕರು ಜಮಾಯಿಸುತ್ತಿದ್ದಂತೆ ಸ್ಥಳಕ್ಕೆ ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಜನಾರ್ದನ್ ಹಾಗೂ ಸಿಬ್ಬಂದಿ ಆಗಮಿಸಿದರು. ಈ ಸಂದರ್ಭದಲ್ಲಿ ಗ್ಯಾಸ್ ಪಂಪ್ ಮಾಲಕರಲ್ಲಿ ಮಾತುಕತೆ ನಡೆಸಿದರೂ ದರ ಕಡಿಮೆ ಮಾಡಲು ಅವರು ಒಪ್ಪದಿದ್ದಾಗ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ಯಾಸ್ ಪಂಪ್‌ನ್ನು ತಕ್ಷಣ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡಿದರು. ಬಳಿಕ ಪಂಪ್ ಮುಂದೆ ಹಗ್ಗ ಕಟ್ಟಿ ವಾಹನಗಳು ತೆರಳದಂತೆ ಬಂದ್ ಮಾಡಲಾಯಿತು.
PublicNext
06/04/2026 07:10 pm