ಶಿರಸಿ: ಯಕ್ಷಗಾನ ಎಂಬುದು ಕೇವಲ ಪ್ರದರ್ಶಕ ಕಲೆಯಲ್ಲ, ಅದೊಂದು ದೇವರ ಆರಾಧನಾ ಕಲೆ. ಕಲಿಕಾರ್ಥಿಗಳು ಈ ಕಲೆಯನ್ನು ಅತ್ಯಂತ ಶ್ರದ್ಧೆಯಿಂದ ಮೈಗೂಡಿಸಿಕೊಂಡು ಭಕ್ತಿಯಿಂದ ಪ್ರದರ್ಶಿಸಬೇಕು ಎಂದು ಉಡುಪಿಯ ಪ್ರಸಿದ್ಧ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಹೇಳಿದರು.
ಇಲ್ಲಿನ ನೆಮ್ಮದಿ ಆವರಣದಲ್ಲಿ 'ಯಕ್ಷಗೆಜ್ಜೆ' ತಂಡದಿಂದ ಆಯೋಜಿಸಲಾಗಿದ್ದ ಏಳು ದಿನಗಳ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು .
ಶಿಬಿರಾರ್ಥಿಗಳು ಕೇವಲ ಹೆಜ್ಜೆಗಾರಿಕೆಗೆ ಸೀಮಿತವಾಗದೆ, ನಮ್ಮ ಸಂಸ್ಕೃತಿಯ ತಳಹದಿಯಾದ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಬೇಕು. ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ಮಾತ್ರ ಯಕ್ಷಗಾನ ಕ್ಷೇತ್ರದಲ್ಲಿ ಪ್ರೌಢಿಮೆ ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಈ ಶಿಬಿರದಲ್ಲಿ 5-6 ವರ್ಷದ ಪುಟ್ಟ ಮಕ್ಕಳಿಂದ ಹಿಡಿದು 60 ವರ್ಷದ ಹಿರಿಯರವರೆಗೆ ಪಾಲ್ಗೊಂಡು ಆಸಕ್ತಿಯಿಂದ ಕಲಿತಿದ್ದು ವಿಶೇಷವಾಗಿತ್ತು. ಈ ಅಪರೂಪದ ಕಲಾ ಪ್ರೇಮವನ್ನು ಕಂಡು ಸಂಜೀವ ಸುವರ್ಣ ಅವರು ಶಿರಸಿಯ ಕಲಾಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಹಾಗೂ ಶಿಬಿರದ ಮಾರ್ಗದರ್ಶಕ ಬನ್ನಂಜೆ ಸಂಜೀವ ಸುವರ್ಣ ಹಾಗೂ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಶಿಶಿರ ಸುವರ್ಣ ಅವರನ್ನು ಯಕ್ಷಗೆಜ್ಜೆ ತಂಡದ ವತಿಯಿಂದ ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ಶ್ರೀಧರ ಭಾಗವತ ಹಣಗಾರ, ಗಜಾನನ ಭಾಗವತ ತುಳಗೇರಿ, ಹಿರಿಯ ಮದ್ದಲೆ ಗಾರರಾದ ಕಂಚೀಮನೆ ಮಂಜುನಾಥ ಹೆಗಡೆ ಹಾಗೂ ಎಂ. ಕೆ. ಹೆಗಡೆ ಗೊಳಿಕೊಪ್ಪ ಅವರು ಉಪಸ್ಥಿತರಿದ್ದರು. ಯಕ್ಷಗೆಜ್ಜೆಯ ನಿರ್ಮಲಾ ಗೊಳಿಕೊಪ್ಪ ನಿರ್ವಹಿಸಿದರು. ಶಿಬಿರದ ಮುಕ್ತಾಯದ ದಿನದಂದು ಶಿಬಿರಾರ್ಥಿಗಳು ತರಬೇತಿಯಲ್ಲಿ ಕಲಿತ ಯಕ್ಷಗಾನ ಪಟ್ಟುಗಳನ್ನು ಪ್ರದರ್ಶಿಸಿ ಸಭಿಕರ ಗಮನ ಸೆಳೆದರು. ಹಿಮ್ಮೇಳದಲ್ಲಿ ಶ್ರೀಧರ ಹೆಗಡೆ ಹಣಗಾರ, ಗಜಾನನ ಭಟ್ಟ ತುಳಗೇರಿ, ಶಂಕರ ಭಾಗವತ ಯಲ್ಲಾಪುರ, ಜಗದೀಶ ಹೆಗಡೆ ಬಾಳೆಹದ್ದ ಸಹಕರಿಸಿದರು.
Kshetra Samachara
13/04/2026 05:28 pm