ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಭೀಕರ ಬರದ ಛಾಯೆ, ಬತ್ತಿದ ಕೊಳವೆ ಬಾವಿ; ಟ್ಯಾಂಕರ್ ಗೆ ಮೊರೆಯಿಟ್ಟ ಅನ್ನದಾತ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಶಾಶ್ವತ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಮಳೆರಾಯ ಜಿಲ್ಲೆಯ ರೈತರ ಜೊತೆ ಕಣ್ಣಾಮುಚ್ಚಾಲೆ ಆಡ್ತಿದ್ದಾನೆ. ಇದರಿಂದ ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ಹನಿ ನೀರಿಗೂ ಜನ-ಜಾನುವಾರುಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಲಕ್ಷ ಲಕ್ಷ ಬಂಡವಾಳ ಹೂಡಿದ್ದ ಅಡಿಕೆ ಬೆಳೆಗಾರರ ಗೋಳಂತೂ ಹೇಳತೀರದಾಗಿದೆ. ಮಳೆ ಇಲ್ಲದೇ ಕೆರೆಗಳಲ್ಲಿನ ನೀರು ಸಂಪೂರ್ಣ ಖಾಲಿಯಾಗಿದ್ದು, ಇದರಿಂದ ಕೊಳವೆ ಬಾವಿಗಳು ಕೂಡಾ ಬತ್ತಿ ಹೋಗಿವೆ. ಕೊಳವೆ ಬಾವಿಗಳು ಕೈಕೊಟ್ಟಿದ್ದರಿಂದ ಅಡಿಕೆ ತೋಟಗಳು ಕೂಡಾ ಬಿಸಿಲಿಗೆ ಬಳಲಿ ಬೆಂಡಾಗಿದ್ದು, ಮರದಲ್ಲಿನ ಹೊಂಬಾಳೆ ಕೂಡಾ ಒಣಗಿ ಹೋಗುತ್ತಿದೆ. ಇನ್ನೂ ತೋಟ ಉಳಿಸಿಕೊಳ್ಳಲು ಅನ್ನದಾತರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ.

ಹೌದು! ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೌನಹಳ್ಳಿ, ಭೂತಯ್ಯನಹಟ್ಟಿ, ಕೊಳಾಳ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಡಿಕೆ ತೋಟಗಳು ಒಣಗುತ್ತಿದ್ದು, ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ನಿತ್ಯ ನೂರಾರು ಟ್ಯಾಂಕರ್‌ಗಳ ಮೂಲಕ ತೋಟಗಳಿಗೆ ನೀರು ಹೊಡೆಯುತ್ತಿದ್ದು, ತೋಟ ಉಳಿಸಿಕೊಳ್ಳಲು ಅನ್ನದಾತರು ಪರದಾಡುತ್ತಿದ್ದಾರೆ.

ಇನ್ನೂ ವಾಣಿ ವಿಲಾಸ ಸಾಗರ ಜಲಾಶಯದ ಪಕ್ಕದ ಗ್ರಾಮಗಳಲ್ಲೇ ಈ ಸ್ಥಿತಿ ನಿರ್ಮಾಣವಾಗಿದ್ದು, ರೈತರಂತೂ ಹಗಲು- ರಾತ್ರಿ ಎನ್ನದೇ ಅಡಿಕೆ ತೋಟಗಳ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ ಟ್ಯಾಂಕರ್‌ಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಕೊಟ್ಟು ನಿತ್ಯ 20ಕ್ಕೂ ಹೆಚ್ಚು ಟ್ಯಾಂಕರ್ ನೀರು ತೊಟ್ಟಿಗಳಿಗೆ ಸ್ಟಾಕ್ ಮಾಡ್ತಿದ್ದಾರೆ. ಬಳಿಕ ಅದೇ ನೀರನ್ನು ಅಡಿಕೆ ಮರಗಳಿಗೆ ಹರಿಸುವ ಮೂಲಕ ಬೇಸಿಗೆ ಬಿಸಿಲಿನಿಂದ ಅಡಿಕೆ ಮರಗಳನ್ನು ರಕ್ಷಣೆ ಮಾಡಲು ರೈತರು ಹರಸಾಹಸ ಪಡ್ತಿದ್ದಾರೆ.

ಇನ್ನೂ ಬೃಹತ್ ಪ್ರಮಾಣದ ತೋಟ ಮಾಡಿದವರ ಪಾಡು ಹೇಳತೀರದಾಗಿದೆ. ಕಳೆದ ಎರಡು ತಿಂಗಳಿಂದ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಸಾಲದ ಸುಳಿಗೆ ಸಿಲುಕಿ ಕಣ್ಣೀರಿಡುತ್ತಿದ್ದಾರೆ

ಒಟ್ಟಾರೇ ಭೀಕರ ಬರದ ಛಾಯೆ ಆವರಿಸಿದ್ದು, ಮಳೆರಾಯನನ್ನು ನೆಚ್ಚಿ ಅಡಿಕೆ ತೋಟ ಕಟ್ಟಿದ್ದ ರೈತನ ಬದುಕು ಮೂರಾಬಟ್ಟೆಯಾಗಿದೆ. ಇತ್ತ ಅಡಿಕೆ ಬೆಳೆಯೂ ಸಿಗದೇ, ಅಡಿಕೆ ಮರಗಳು ಉಳಿಯದೇ ಸಾಲ ಮಾಡಿದ್ದ ರೈತ ಕಣ್ಣೀರು ಹಾಕುತ್ತಿದ್ದಾನೆ. ಇನ್ನಾದ್ರೂ ಸರ್ಕಾರ ಜಿಲ್ಲೆಯ ಅನ್ನದಾತರ ನೆರವಿಗೆ ಧಾವಿಸಲಿ ಅನ್ನೋದು ನಮ್ಮ ಒತ್ತಾಯ

Edited By : Shivu K
PublicNext

PublicNext

18/04/2026 10:12 pm

Cinque Terre

20.78 K

Cinque Terre

0

ಸಂಬಂಧಿತ ಸುದ್ದಿ