ಮೈಸೂರು: ಕಾಡಾನೆ ಹಿಂಡಿನಿಂದ ತಪ್ಪಿಸಿಕೊಳ್ಳಲು ಹೋದ ಕರ್ತವ್ಯ ನಿರತ ಅರಣ್ಯ ರಕ್ಷಕ ಕಬಿನಿ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅರಣ್ಯ ರಕ್ಷಕ ಸುಪ್ರೀತ್ (36) ನೀರು ಪಾಲಾಗಿ ಸಾವನ್ನಪ್ಪಿರುವ ನೌಕರ. ಹೆಚ್.ಡಿ ಕೋಟೆ ತಾಲ್ಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್ ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವಲಯದ, ಕಾರಾಪುರ ಸಮೀಪದ ಉದ್ಬೂರು ಕ್ಯಾಂಪ್ ನಲ್ಲಿ ಕಳ್ಳಬೇಟೆ ತಡೆಯಲ್ಲಿ ಮಂಗಳವಾರ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಬುಧವಾರ ಮುಂಜಾನೆ ಕಾಡಾನೆಗಳ ಹಿಂಡು ಕರ್ತವ್ಯ ನಿರತರನ್ನು ಅಟ್ಟಾಡಿಸಿವೆ. ಸಹೋದ್ಯೋಗಿ ವನರಕ್ಷಕರಾದ ಅಯ್ಯಪ್ಪ ಹಾಗೂ ಅಮನ್ ದಿಕ್ಕಾಪಾಲಾಗಿ ಓಡಿದರೆ, ಹತ್ತಿರದಲ್ಲಿದ್ದ ಕಬಿನಿ ಹಿನ್ನೀರಿಗೆ ಸುಪ್ರೀತ್ ಹಾರಿದ್ದು, ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಹೋದ್ಯೋಗಿಗಳ ಚೀರಾಟದ ನಂತರ ವಿಷಯ ಬೆಳಕಿಗೆ ಬಂದಿದೆ. ಘಟನಾಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ಎಂ.ಜಿ ಸೋಮಣ್ಣ, ಸಿಬ್ಬಂದಿ ಪುಂಡಲೀಕ ಲಮಾಣಿ, ಮುನಿಸಿದ್ದ ನಾಯಕ, ರಾಹುಲ್ ಪಾಟೀಲ್, ಹೇಮಂತ ಕುಮಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕಾರಾಪುರ, ಕಬಿನಿ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್‌ನ ಸಿಬ್ಬಂದಿ, ಇಟ್ನ ಗ್ರಾಮದ ನುರಿತ ಈಜುಗಾರರು, ಮಧ್ಯಾಹ್ನ ಕೇರಳದಿಂದ ಆಗಮಿಸಿದ್ದ ಮುಳುಗು ತಜ್ಞರು ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಿದರು. ಸಂಜೆ 7ರ ನಂತರವೂ ಮೃತರ ಸುಳಿವು ಸಿಕ್ಕಿರಲಿಲ್ಲ. ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
22/04/2026 10:36 pm
LOADING...