ಮೈಸೂರು: ಮೈಸೂರಿನ ಹಳೆ ಕೆಸರೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡು ಪತಿಯೇ ಕೊಡಲಿಯಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆಯಾದ ದುರ್ದೈವಿ ಪುಷ್ಪಾ (26) ಆಗಿದ್ದು, ಆಕೆಯ ಪತಿ ಮಹೇಶ್ ಕೊಲೆ ಆರೋಪಿಯಾಗಿದ್ದಾನೆ. ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಪುಷ್ಪಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಮಹೇಶ್ ಮೈಸೂರಿನ ಬಾರ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮೊದಲಿನಿಂದಲೂ ಪತ್ನಿಯ ಚಾರಿತ್ರ್ಯದ ಮೇಲೆ ಮಹೇಶ್‌ಗೆ ಅನುಮಾನವಿತ್ತು. ಈ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಮಹೇಶ್ ಕುಡಿದು ಬಂದಾಗಲೆಲ್ಲಾ ಪತ್ನಿಯೊಂದಿಗೆ ಜಗಳವಾಡಿ ಚಿತ್ರಹಿಂಸೆ ನೀಡುತ್ತಿದ್ದ ಎಂದು ಪುಷ್ಪಾ ಕುಟುಂಬದವರು ಆರೋಪಿಸಿದ್ದಾರೆ.
ಕೊಲೆಗೆ ಕಾರಣವಾದ ಚಿನ್ನದ ಓಲೆ ವಿವಾದ
ಕಳೆದ ರಾತ್ರಿ, ಪುಷ್ಪಾಳ ಅಜ್ಜಿ ಏಳು ತಿಂಗಳ ಹಿಂದೆ ಪ್ರೀತಿಯಿಂದ ಕೊಟ್ಟಿದ್ದ ಚಿನ್ನದ ಓಲೆಯನ್ನು ಮಹೇಶ್ ಹಾಳು ಮಾಡಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಪುಷ್ಪಾ ಮತ್ತು ಮಹೇಶ್ ನಡುವೆ ತೀವ್ರ ವಾಗ್ವಾದ ಶುರುವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಕೋಪಗೊಂಡ ಮಹೇಶ್ ಕೊಡಲಿಯಿಂದ ಪುಷ್ಪಾಳ ತಲೆಗೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಅಣ್ಣನಿಗೆ ಕೊನೆಯ ಕರೆ ಮತ್ತು ಕುಟುಂಬದ ಆರೋಪ
ಕೊಲೆ ನಡೆಯುವ ಮುನ್ನ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಪುಷ್ಪಾ ತನ್ನ ಅಣ್ಣನಿಗೆ ಕರೆ ಮಾಡಿ, ಪತಿಯೊಂದಿಗೆ ಜಗಳ ನಡೆಯುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದಳು. ಬೆಳಗ್ಗೆ ಮನೆಗೆ ಬರುವಂತೆ ಅಣ್ಣ ಸಮಾಧಾನ ಮಾಡಿದ್ದ. ಆನಂತರ, ಮಹೇಶನ ಜತೆ ಮಾತನಾಡಿದ್ದ ಪುಷ್ಪಾಳ ಅಣ್ಣ, ತಂಗಿಯನ್ನು ತಮ್ಮ ಮನೆಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದ. ಆದರೆ ಅಷ್ಟರಲ್ಲಾಗಲೇ ಮಹೇಶ್ ಪುಷ್ಪಾಳನ್ನು ರಕ್ತದ ಮಡುವಿನಲ್ಲಿ ಮಲಗಿಸಿದ್ದ.
ಪತಿ ಸೇರಿ ನಾಲ್ವರ ಶರಣಾಗತಿ
ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ನಡೆದ ನಂತರ ಆರೋಪಿ ಮಹೇಶ್, ಆತನ ತಾಯಿ, ಅಕ್ಕ ಮತ್ತು ಭಾವ ಸೇರಿ ಒಟ್ಟು ನಾಲ್ವರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
01/05/2026 11:08 am