ನಂಜನಗೂಡು: ಬೇಸಿಗೆಯ ಬಿರು ಬಿಸಿಲಿಗೆ ಕಪಿಲೆಯ ಒಡಲು ಬರಿದಾಗಿ ನೀರಿನ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಭೋರ್ಗರೆದು ಹರಿಯುತ್ತಿದ್ದ ಕಪಿಲೆ ಈಗ ತಣ್ಣಗಾಗಿದ್ದಾಳೆ. ಈ ಮಧ್ಯೆ ದಕ್ಷಿಣ ಕಾಶಿ ನಂಜನಗೂಡಿನ ಸುತ್ತಮುತ್ತಲ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ತ್ಯಾಜ್ಯ ಹಾಗೂ ಕೊಳಚೆ ನೀರು ಕಪಿಲೆಯ ಒಡಲು ಸೇರುತ್ತಿದೆ. ನದಿ ಪಾತ್ರವಂತೂ ಮಲಿನವಾಗಿ ಗಬ್ಬೆದ್ದು ನಾರುತ್ತಿದೆ.
ಪಾಪಗಳನ್ನು ಕಳೆಯಲು ದಕ್ಷಿಣ ಕಾಶಿಗೆ ಹರಿದು ಬರುವ ಲಕ್ಷಾಂತರ ಭಕ್ತರು ಕಪಿಲೆಯಲ್ಲಿ ಮಿಂದು ಚರ್ಮರೋಗಗಳಿಗೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ. ಪಾಪ ಕಳೆಯುವ ಧಾರ್ಮಿಕ ಪುಣ್ಯ ಕ್ಷೇತ್ರದ ಕಪಿಲೆಯ ಒಡಲಿಗೆ ನಂಜನಗೂಡು ನಗರದಲ್ಲಿರುವ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯದ ನೀರು ಮತ್ತು ನಗರದ ಒಳಚರಂಡಿ ಕೊಳಚೆ ನೀರು ಸೇರಿ ಸಂಪೂರ್ಣವಾಗಿ ಕಲ್ಮಶವಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದುರಾಡಳಿತಕ್ಕೆ ಸಾವಿರಾರು ವರ್ಷಗಳ ಧಾರ್ಮಿಕ ಪುಣ್ಯ ಕ್ಷೇತ್ರದ ಕಪಿಲೆ ರೋಗ ಹರಡುವ ಭೀತಿ ಸೃಷ್ಟಿಸುತ್ತಿದ್ದಾಳೆ.
ಮಳೆ ಇಲ್ಲದೆ ಬೇಸಿಗೆಯಿಂದಾಗಿ ಕಪಿಲಾ ನದಿ ಸಂಪೂರ್ಣವಾಗಿ ತಳ ಹಿಡಿದಿದೆ. ಕೈಗಾರಿಕೆಗಳ ರಾಸಾಯನಿಕ ನೀರು ಮತ್ತು ನಗರದ ಒಳಚರಂಡಿಯ ತ್ಯಾಜ್ಯದ ನೀರು ನೇರವಾಗಿ ಕಪಿಲಾ ನದಿಗೆ ಸೇರುತ್ತಿದೆ. ರಾಜ್ಯದಲ್ಲಿ ಕೋಟಿ, ಕೋಟಿ ಆದಾಯ ತರುವ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ದಿನನಿತ್ಯ ಮತ್ತು ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಇಂತಹ ಧಾರ್ಮಿಕ ಪುಣ್ಯಕ್ಷೇತ್ರದ ಭಕ್ತರಿಗೆ ಉತ್ತಮವಾದ ಸೌಲಭ್ಯ ಕಲ್ಪಿಸಲು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂಬುದಕ್ಕೆ ಕಪಿಲೆಯೇ ಸಾಕ್ಷಿ. ಸಭೆ- ಸಮಾರಂಭಗಳಲ್ಲಿ ನೂರಾರು ಕೋಟಿ ಅನುದಾನ ತಂದಿದ್ದೇವೆ ಎಂದು ಬೊಗಳೆ ಬಿಡುವ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಪಿಲಾ ನದಿಯ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಇದಕ್ಕೆ ಕಾಯಕಲ್ಪ ಕಲ್ಪಿಸ ಬೇಕಿದೆ.
-ಸಿ.ಎಂ. ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ಮೈಸೂರು
PublicNext
23/04/2026 08:16 pm
LOADING...