ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಮುಖ ಗುರುತು ಸಿಗದಂತೆ ಬರ್ಬರ ಹತ್ಯೆ - ಗ್ರಾಮದಲ್ಲಿ ಸರಣಿ ಕೊಲೆಗಳ ಆತಂಕ!

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಭೀಕರ ಹತ್ಯೆ ನಡೆದಿದ್ದು, ಸಾವಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಕೊಲೆಗಳ ಆತಂಕ ಸೃಷ್ಟಿಯಾಗಿದೆ. ಗ್ರಾಮದ ಜನತಾ ಪ್ಲಾಟ್‌ನಲ್ಲಿ ಮನೆಯ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ವೇಳೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮುಖ ಗುರುತು ಸಿಗದಂತೆ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಘಟನಾ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮೃತರನ್ನು ಅಶೋಕ ಕೋಳಿ (40) ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಉತ್ತಮ ಶಿಂಧೆ ಎಂಬ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಈ ಭೀಕರ ಘಟನೆಯಿಂದ ಇಡೀ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಮವು ಸಂಪೂರ್ಣ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್, ಡಿವೈಎಸ್ಪಿ ಸಯ್ಯದ್ ರೋಷನ್, ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಸ್ಥಳೀಯ ಪಿಎಸ್‍ಐ ಅಪ್ಪಣ್ಣ ಐಗಳಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ವರದಿ : ವಿನೋದ್ ಸೂರಗೊಂಡ ಪಬ್ಲಿಕ್ ನೆಕ್ಸ್ಟ್ ಬಾಗಲಕೋಟೆ

Edited By : Somashekar
PublicNext

PublicNext

23/04/2026 05:40 pm

Cinque Terre

14.09 K

Cinque Terre

0