ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಬಡವರ ಹಸಿವು ನೀಗಿಸಬೇಕಾದ ಪಡಿತರ ಅಕ್ಕಿಯ ಅಕ್ರಮ ಸಾಗಾಟ ಮತ್ತು ಸಂಗ್ರಹಣೆ ಅವ್ಯಾಹತವಾಗಿ ಮುಂದುವರಿದಿದೆ. ಅಧಿಕಾರಿಗಳು ದಾಳಿ ನಡೆಸಿದರೂ ಸಹ ಈ ಜಾಲಕ್ಕೆ ಕಡಿವಾಣ ಬೀಳುತ್ತಿಲ್ಲ. ಜಿಲ್ಲೆಯ ಜಮಖಂಡಿಯಲ್ಲಿ ಮತ್ತೊಮ್ಮೆ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅನ್ನ ಭಾಗ್ಯ ಯೋಜನೆಯ 40 ಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಗರದ ಕಡಕೋಳ ರಸ್ತೆಯ ಆಯಿಶಾ ಕಾಲೋನಿಯಲ್ಲಿರುವ ಮನೆಯೊಂದರಲ್ಲಿ ಈ ಅಕ್ರಮ ಸಂಗ್ರಹಣೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಮಖಂಡಿ ತಹಶೀಲ್ದಾರ್ ಅನಿಲ್ ಬಡಿಗೇರ ಮತ್ತು ಆಹಾರ ಇಲಾಖೆಯ ಅಧಿಕಾರಿ ಆನಂದ ರಾಠೋಡ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಈ ವೇಳೆ 40 ಕ್ಕೂ ಹೆಚ್ಚು ಅಕ್ಕಿ ಮೂಟೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ಸೀಜ್ ಮಾಡಿದ್ದಾರೆ.
ಅಕ್ಕಿ ಸಂಗ್ರಹಣೆಯ ಹೊಣೆ ಹೊತ್ತವರು ಯಾರು? ಈ ಅಕ್ಕಿಯನ್ನು ಎಲ್ಲಿಗೆ ಸಾಗಿಸಲು ಸಿದ್ಧತೆ ಮಾಡಲಾಗಿತ್ತು? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಕಡಿವಾಣ ಹಾಕಲು ಸಾಧ್ಯವಾಗದಿರುವುದು ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
PublicNext
26/04/2026 03:43 pm
LOADING...