ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಹೋದ್ಯೋಗಿ ವೈದ್ಯನಿಗೇ ಸುಣ್ಣ ಬಳಿದ ಮಾಜಿ ಜಿಲ್ಲಾ ಸರ್ಜನ್ ವಿರುದ್ಧ ಮತ್ತೊಂದು FIR ದಾಖಲು

ಚಿಕ್ಕಮಗಳೂರು: ಮೆಡಿಕಲ್ ಮಾಲೀಕನಿಗೆ ವಂಚಿಸಿ ಬಂಧಿತನಾಗಿರುವ ನಕಲಿ ಐಎಎಸ್ ಅಧಿಕಾರಿ ಮಿಥುನ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮಾಜಿ ಸರ್ಜನ್ ಡಾ. ಚಂದ್ರಶೇಖರ್ ವಿರುದ್ಧ ಈಗ ಮತ್ತೊಂದು ಗಂಭೀರ ವಂಚನೆ ಪ್ರಕರಣ ದಾಖಲಾಗಿದೆ. ಈಗಾಗಲೇ ಮೆಡಿಕಲ್ ಶಾಪ್ ಮಾಲೀಕರೊಬ್ಬರಿಗೆ ಸರ್ಕಾರಿ ಟೆಂಡರ್ ಕೊಡಿಸುವುದಾಗಿ ನಂಬಿಸಿ ₹41 ಲಕ್ಷ ಹಣ ಪಡೆದು ವಂಚಿಸಿದ್ದ ಈ ಜೋಡಿ, ಇದೀಗ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ. ಪ್ರೇಮಕುಮಾರ್ ಅವರಿಗೆ ಲಕ್ಷಾಂತರ ರೂಪಾಯಿ ದ್ರೋಹ ಬಗೆದಿರುವ ಸಂಗತಿ ಬೆಳಕಿಗೆ ಬಂದಿದೆ. ಮಾಜಿ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರು ಮಿಥುನ್ ಎಂಬಾತನನ್ನು 2023 ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಪ್ರೇಮಕುಮಾರ್ ಅವರಿಗೆ ಪರಿಚಯಿಸಿ, ಆತ ಅತ್ಯಂತ ಬಡತನದಿಂದ ಬಂದವನೆಂದು ಸುಳ್ಳು ಹೇಳಿ ಹಣದ ಸಹಾಯ ಮಾಡುವಂತೆ ಒತ್ತಾಯಿಸಿದ್ದರು.

ಜಿಲ್ಲಾ ಸರ್ಜನ್ ನೀಡಿದ ಭರವಸೆಯ ಮೇಲೆ ನಂಬಿಕೆಯಿಟ್ಟ ಡಾ. ಪ್ರೇಮಕುಮಾರ್ ಮಿಥುನ್‌ನ ಐಎಎಸ್ ತರಬೇತಿ ವೆಚ್ಚ, ಚಿಕಿತ್ಸೆ ಹಾಗೂ ಆತನ ಸಂಬಂಧಿಕರ ಮನೆ ನಿರ್ಮಾಣದ ನೆಪದಲ್ಲಿ ಹಂತ ಹಂತವಾಗಿ ಸುಮಾರು ₹8,02,000 ಹಣವನ್ನು ನೀಡಿದ್ದರು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ನಡೆದ 'ದಂತ ಭಾಗ್ಯ' ಶಿಬಿರದ ವೆಚ್ಚವನ್ನೂ ದಾನಿಗಳಿಂದ ಹಣ ಬರುತ್ತದೆ ಎಂಬ ಸುಳ್ಳು ಆಶ್ವಾಸನೆಯೊಂದಿಗೆ ಪ್ರೇಮಕುಮಾರ್ ಅವರ ಕೈಯಿಂದಲೇ ಪಾವತಿಸುವಂತೆ ಮಾಡಿ ವಂಚಿಸಲಾಗಿತ್ತು. ಮಿಥುನ್ ಐಎಎಸ್ ಅಧಿಕಾರಿಯೇ ಅಲ್ಲ ಎಂಬ ಸತ್ಯ ತಿಳಿದಿದ್ದರೂ ಡಾ. ಚಂದ್ರಶೇಖರ್ ಅವರು ಆತನೊಂದಿಗೆ ಶಾಮೀಲಾಗಿ ಪೂರ್ವನಿಯೋಜಿತವಾಗಿ ಈ ಸಂಚು ರೂಪಿಸಲಾಗಿದೆ ಎಂದು ದೂರಲಾಗಿದೆ. ಹಣ ವಾಪಸ್ ಕೇಳಿದಾಗ ಮಿಥುನ್ ಈವರೆಗೆ ಕೇವಲ ₹4,05,000 ಹಣವನ್ನು ಮರಳಿಸಿದ್ದು, ಬಾಕಿ ಇರುವ ₹3,97,000 ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಪ್ರೇಮಕುಮಾರ್ ಅವರು ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Edited By : Somashekar
PublicNext

PublicNext

28/04/2026 01:50 pm

Cinque Terre

6.99 K

Cinque Terre

0

ಸಂಬಂಧಿತ ಸುದ್ದಿ