ಬೆಂಗಳೂರು : ನೂರ ಹತ್ತು ವರ್ಷಗಳ ಕೆಎಸ್ ಡಿಎಲ್ ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 2016 ಕೋಟಿ ಬೃಹತ್ ಮೊತ್ತದ ವಹಿವಾಟು ನಡೆಸಿ 507 ಕೋಟಿಯಷ್ಟು ನಿವ್ವಳ ಲಾಭ ಗಳಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ-KSDLನ ಮತ್ತೊಂದು ಘಟಕವನ್ನು ಅತ್ತ ವಿಜಯಪುರದಲ್ಲಿ ಸ್ಥಾಪಿಸಲು ಸರ್ಕಾರ 229 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೃಹತ್ ಕೈಗಾರಿಕಾ ಖಾತೆಯ ಸಚಿವ ಎಂ.ಬಿ.ಪಾಟೀಲ್ ಅವರು, ವಿಜಯಪುರ ಭಾಗದಲ್ಲಿ 50 ಎಕರೆ ಜಾಗದಲ್ಲಿ ಕೆಎಸ್ ಡಿಎಲ್ ನೂತನ ಘಟಕ ಸ್ಥಾಪನೆಗೆ ಈಗಾಗಲೇ ನಿರ್ಧರಿಸಲಾಗಿದ್ದು, ಶೀಘ್ರವೇ ಘಟಕ ಸ್ಥಾಪನೆಯ ಕಾರ್ಯ ಆರಂಭಿಸಲಾಗುವುದು ಎಂದಿದ್ದಾರೆ.
ಇನ್ನು, ಗಂಧದ ಸಾಬೂನು ತಯಾರಿಕೆಗೆ ಗಂಧದ ಎಣ್ಣೆಯೇ ಮೂಲ ದ್ರವ್ಯ! ಹೀಗಾಗಿ ಹೆಚ್ಚು ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯಲು ಯೋಜನೆ ಹಾಕಿಕೊಳ್ಳಲಾಗಿದ್ದು, 10 ವರ್ಷಗಳ ಅವಧಿಯಲ್ಲಿ ಹತ್ತು ಸಾವಿರ ಶ್ರೀಗಂಧದ ನೆಡುತೋಪು ನಿರ್ಮಾಣ ಮಾಡಲಾಗುತ್ತೆ. ಮಾತ್ರವಲ್ಲ, "ಗ್ರೋ ಮೋರ್ ಸ್ಯಾಂಡಲ್" ಎಂಬ ಯೋಜನೆಯ ಅಡಿಯಲ್ಲಿ ರೈತರ ಸಹಭಾಗಿತ್ವವನ್ನು ಪಡೆಯಲಾಗುವುದು ಎಂದಿದ್ದಾರೆ.
ಹೀಗೆ ಶ್ರೀಗಂಧದ ಗಿಡಗಳನ್ನು ಬೆಳೆದು ಪೋಷಿಸುವವರನ್ನು ಉತ್ತೇಜಿಸಲೆಂದೇ ಪ್ರತಿ ಶ್ರೀಗಂಧದ ಗಿಡಕ್ಕೆ 500 ರೂ.ಗಳಂತೆ ಸರ್ಕಾರದ ವತಿಯಿಂದ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಜೊತೆಗೆ ವಿಜಯಪುರದ ಕೃಷಿ ವಿವಿ ಮತ್ತು ಬೆಂಗಳೂರಿನ ಜಿಕೆವಿಕೆ ಕೃಷಿ ವಿವಿಗಳ ಸಹಯೋಗದಲ್ಲಿ ಶ್ರೀಗಂಧದ ನೂತನ ಅಧ್ಯಯನ ಪೀಠವನ್ನು ತೆರೆಯಲಾಗುವುದು.
ಈ ಎಲ್ಲ ಪ್ರಯತ್ನಗಳ ಸಾಧನೆ ಎಂಬಂತೆ 2028ಕ್ಕೆ ಕೆಎಸ್ ಡಿಎಲ್ 3 ಸಾವಿರ ಮತ್ತು 2030ರ ವೇಳೆಗೆ ದಾಖಲೆಯ ಒಟ್ಟು 5 ಸಾವಿರ ಕೋಟಿ ವ್ಯವಹಾರವನ್ನು ನಡೆಸುವ ಗುರಿ ಹೊಂದಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
PublicNext
28/04/2026 04:49 pm
LOADING...