ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಜೆಪಿ ಕಾರ್ಯಕರ್ತ ಜುಬೇರ್ ಕೊಲೆ ಪ್ರಕರಣ- ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಉಳ್ಳಾಲ ಮುಕ್ಕಚ್ಚೇರಿ ನಿವಾಸಿ, ಬಿಜೆಪಿ ಕಾರ್ಯಕರ್ತ ಜುಬೇರ್ ಎಂಬವರನ್ನು ಕಡಿದು ಕೊಲೆಗೈದಿರುವ ಪ್ರಕರಣದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಮುಖ ಅಪರಾಧಿ ಅಬ್ದುಲ್ ರಹಿಮಾನ್ ಸುಹೈಲ್ (23)ಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇನ್ನುಳಿದ ಆರೋಪಿಗಳಿಗೆ 2022ರಲ್ಲಿ ಶಿಕ್ಷೆ ಪ್ರಕಟವಾಗಿತ್ತು.

2017ರ ಅಕ್ಟೋಬರ್ 4ರಂದು ರಾತ್ರಿ 7.55ಕ್ಕೆ ಮುಕ್ಕಚ್ಚೇರಿ ಮಸೀದಿ ಮುಂಭಾಗ ಜುಬೇರ್ ಎಂಬವರು ಸ್ನೇಹಿತ ಇಲಿಯಾಸ್ ಎಂಬವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಆರೋಪಿಗಳಾದ ಸುಹೈಲ್, ನಿಝಾಮ್, ಮುಸ್ತಾಫ್, ಅಲ್ತಾಫ್, ಆಸಿಫ್, ನಾಸೀರ್ ಎಂಬವರು ತಲ್ವಾರ್, ಕತ್ತಿಯಿಂದ ಕಡಿದು ಜುಬೇರ್ ಅವರನ್ನು ಕೊಲೆ ಮಾಡಿದ್ದರು. ತಡೆಯಲು ಬಂದ ಇಲಿಯಾಸ್ ಅವರಿಗೂ ತಲವಾರಿನಿಂದ ಕಡಿದು ತೀವ್ರ ಗಾಯ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಉಳ್ಳಾಲದ ಆಗಿನ ಇನ್ಸ್‌ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ತನಿಖಾಧಿಕಾರಿಯಾಗಿ ಆರೋಪ ಪಟ್ಟಿ ಸಲ್ಲಿಸಿದ್ದರು.

2022ರ ಎಪ್ರಿಲ್ 20ರಂದು ಜುಬೇರ್ ಕೊಲೆ ಪ್ರಕರಣವನ್ನು ಸಮಗ್ರ ವಿಚಾರಣೆ ನಡೆಸಿದ್ದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ ಜಕಾತಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದರು. 2ರಿಂದ 4ನೇ ಆರೋಪಿಗಳಾದ ನಿಜಾಮ್, ತಾಜುದ್ದೀನ್, ಮುಸ್ತಾಫ್ ಎಂಬವರಿಗೆ ಜೀವಾವಧಿ ಶಿಕ್ಷೆ ನೀಡಿದ್ದರೆ, 6ನೇ ಆರೋಪಿ ಆಸಿಫ್ ಮತ್ತು 7ನೇ ಆರೋಪಿ ನಾಸೀರ್ ಖುಲಾಸೆಗೊಂಡಿದ್ದಾಗಿ ತೀರ್ಪು ಪ್ರಕಟಿಸಿದ್ದರು. 5ನೇ ಆರೋಪಿ ಅಲ್ತಾಫ್ ಈ ನಡುವೆ ಮೃತಪಟ್ಟಿದ್ದ.

ಆದರೆ ಪ್ರಕರಣದಲ್ಲಿ ಜಾಮೀನು ಪಡೆದು ವಿಚಾರಣೆಯ ಅಂತಿಮ ಹಂತದಲ್ಲಿ ಪ್ರಮುಖ ಆರೋಪಿ ಮುಕ್ಕಚ್ಚೇರಿ ನಿವಾಸಿ ಅಬ್ದುಲ್ ರಹಿಮಾನ್ ಸುಹೈಲ್ ತಲೆಮರೆಸಿಕೊಂಡಿದ್ದ. ನಾಲ್ಕು ತಿಂಗಳ ಹಿಂದೆ ಆತನನ್ನು ಬಂಧಿಸಿದ್ದು ಇದೀಗ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ವಾದ ಮಂಡಿಸಿರುತ್ತಾರೆ.

Edited By : Abhishek Kamoji
Kshetra Samachara

Kshetra Samachara

28/04/2026 10:34 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ