ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದು ಅಕ್ರಮ ಮರಳುಗಾರಿಕೆಗೆ ಬಳಸಲಾದ ಮುಟ್ಟುಗೋಲುಗೊಂಡ ದೋಣಿಗಳ ರಾಶಿಯಿಂದ ಕಸದ ಕೊಂಪೆಯಾಗಿ ಮಾರ್ಪಟ್ಟಿತ್ತು. ಹತ್ತು ವರ್ಷಗಳ ಹಿಂದೆ ಕುಂದಾಪುರದ ಅಂದಿನ ಸಹಾಯಕ ಆಯುಕ್ತ ಭೂ ಬಾಲನ್ ಅವರು ಅಕ್ರಮ ಮರಳುಗಾರಿಕೆ ವೇಳೆ ವಶಪಡಿಸಿಕೊಂಡಿದ್ದ ಹಲವಾರು ದೋಣಿಗಳನ್ನು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಬಳಿ ಇರಿಸಲಾಗಿತ್ತು. ದಶಕದಿಂದ ವಿಲೇವಾರಿಯಾಗದೆ ಬಿದ್ದಿದ್ದ ಈ ದೋಣಿಗಳು ಠಾಣಾ ಪರಿಸರವನ್ನು ಕಸದ ರಾಶಿಯನ್ನಾಗಿ ಪರಿವರ್ತಿಸಿದ್ದವು ಎಂದು ಏಳು ದಿನಗಳ ಹಿಂದೆ 'ಪಬ್ಲಿಕ್ ನೆಕ್ಸ್ಟ್' ಪ್ರಕಟಿಸಿದ ವರದಿಗೆ ಇದೀಗ ಭಾರಿ ಸ್ಪಂದನೆ ದೊರೆತಿದೆ.
ವರದಿಗೆ ತಕ್ಷಣವೇ ಸ್ಪಂದಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಕ್ರಮ ಕೈಗೊಂಡಿದ್ದಾರೆ. ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿಯ ದಕ್ಷಿಣ ಭಾಗದಲ್ಲಿ ಸಂಗ್ರಹವಾಗಿದ್ದ ನಿರುಪಯುಕ್ತ ದೋಣಿಗಳಿಂದ ಉಂಟಾಗುತ್ತಿದ್ದ ಪರಿಸರ ಹಾನಿ, ಮಳೆಗಾಲದಲ್ಲಿ ನೀರು ಶೇಖರಣೆಯಿಂದ ಮಲಿನ ವಾತಾವರಣ ಸೃಷ್ಟಿಯಾಗುವ ಕುರಿತು 'ಪಬ್ಲಿಕ್ ನೆಕ್ಸ್ಟ್' ವಿಸ್ತೃತ ಮಾಹಿತಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ, ಬುಧವಾರ ಬೆಳಗ್ಗೆಯಿಂದಲೇ ಬ್ರಹ್ಮಾವರ ಠಾಣಾಧಿಕಾರಿಗಳ ನೇತೃತ್ವದಲ್ಲಿ ದೋಣಿಗಳನ್ನು ತುಂಡರಿಸಿ, ಜಾಗವನ್ನು ಸ್ವಚ್ಛಗೊಳಿಸಿ ಠಾಣಾ ಪರಿಸರವನ್ನು ಸುಂದರಗೊಳಿಸಲಾಗಿದೆ. ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಅಧಿಕಾರಿಗಳು, ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನಲ್ಲಿದ್ದ ಹಳೆಯ ದೋಣಿಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ.
ಒಂದು ಕಾಲದಲ್ಲಿ ಈ ವಿಶಾಲವಾದ ಜಾಗದಲ್ಲಿ ಪೊಲೀಸ್ ಸಿಬ್ಬಂದಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ಕ್ರೀಡಾಕೂಟಗಳನ್ನು ನಡೆಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ, ದೋಣಿಗಳ ರಾಶಿಯಿಂದಾಗಿ ಆ ವೈಭವದ ಕುರುಹುಗಳು ಮಾತ್ರ ಉಳಿದಿದ್ದವು. ದೋಣಿಗಳಲ್ಲಿ ನೀರು ತುಂಬಿ ಸೊಳ್ಳೆಗಳು ಮತ್ತು ಇತರ ಉಪದ್ರವಕಾರಿ ಕೀಟಗಳು ಉತ್ಪಾದನೆಯಾಗಿ ಮಾರಕ ರೋಗಗಳ ಭೀತಿ ಹುಟ್ಟಿಸಿದ್ದವು. ಪೊಲೀಸ್ ಠಾಣೆಗೆ ಸಮೀಪದಲ್ಲಿಯೇ ಸಹಸ್ರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಮೂರು ಸರ್ಕಾರಿ ಶಾಲೆಗಳು, ಗ್ರಾಮ ಪಂಚಾಯತಿ, ಬಸ್ ನಿಲ್ದಾಣ, ಅಂಚೆ ಕಚೇರಿ, ಪಾಸ್‌ಪೋರ್ಟ್ ಕಚೇರಿ ಮತ್ತು 80 ಪೊಲೀಸ್ ವಸತಿ ಗೃಹಗಳಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗುವ ಅಪಾಯವಿತ್ತು. ಕೂಡಲೇ ದೋಣಿಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛಗೊಳಿಸಬೇಕೆಂದು ವರದಿಯಲ್ಲಿ ಒತ್ತಿ ಹೇಳಲಾಗಿತ್ತು.
'ಪಬ್ಲಿಕ್ ನೆಕ್ಸ್ಟ್' ವರದಿಯ ಪರಿಣಾಮವಾಗಿ ಅಧಿಕಾರಿಗಳು ತಕ್ಷಣ ಕೈಗೊಂಡ ಈ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
PublicNext
30/04/2026 02:44 pm