ಮಂಗಳೂರು: 2047ರೊಳಗೆ ವಿಶ್ವದ ಮುಂಚೂಣಿ ರಾಷ್ಟ್ರವಾಗಿ ಭಾರತ ಬೆಳೆಯಲಿದೆ. ಆದರೆ ಭಾರತ ಈ ರೀತಿ ರೂಪುಗೊಳ್ಳಬೇಕಾದರೆ, ಸರ್ಕಾರ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕನೂ ತನ್ನ ಕರ್ತವ್ಯವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.
ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ ಮಂಗಳವಾರ ನಡೆದ ನಿಟ್ಟೆ ಡಾ.ಎನ್.ವಿನಯ ಹೆಗ್ಡೆ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತ-2047ರ ದೃಷ್ಟಿಕೋನ’ ಎಂಬ ವಿಷಯದ ಕುರಿತಾಗಿ ಅವರು ಉಪನ್ಯಾಸ ನೀಡಿದರು.
ವಿಕಸಿತ ಭಾರತ ಎಂಬುದು ಬಹು ದೂರದ ಗುರಿಯಲ್ಲ, ಇನ್ನು ಎರಡು ದಶಕಗಳಲ್ಲೇ ಸಾಧಿಸಬೇಕಾದ ಮಹತ್ವದ ಹಂತವಾಗಿದೆ. 2047ರೊಳಗೆ ಭಾರತವನ್ನು ಸಮೃದ್ಧ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಕರಾವಳಿ ಕರ್ನಾಟಕದಲ್ಲಿ ಶಿಕ್ಷಣ ಅವಕಾಶಗಳನ್ನು ವಿಸ್ತರಿಸಿ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಶ್ರೇಷ್ಠತೆಯ ಪ್ರತೀಕವಾಗಿ ಗುರುತಿಸಿಕೊಂಡ ನಿಟ್ಟೆ ವಿನಯ ಹೆಗ್ಡೆಯವರ ಶೈಕ್ಷಣಿಕ ಮತ್ತು ಸಮಾಜ ಸೇವೆಯನ್ನು ಜನತೆ ಮರೆಯಲು ಸಾಧ್ಯವಿಲ್ಲ. ಅವರು ಶೈಕ್ಷಣಿಕ ರಂಗಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಇಂತಹ ಅನೇಕ ಶಿಕ್ಷಣ ತಜ್ಞರು ಕರಾವಳಿಗೆ ಮಾತ್ರವಲ್ಲದೆ ರಾಜ್ಯ ಮತ್ತು ದೇಶದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2014ರ ಹಣಕಾಸು ವರ್ಷದಲ್ಲಿ 1.90ಲಕ್ಷ ಕೋ.ರೂ.ಮಟ್ಟದಲ್ಲಿದ್ದ ಆರ್ಥಿಕ ವಲಯವು 2026ರ ವೇಳೆಗೆ 21.20ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಸಾಮರ್ಥ್ಯದಲ್ಲಿ ಮಹತ್ತರ ಬದಲಾವಣೆಯನ್ನು ಸೂಚಿಸುತ್ತದೆ. ಅದೇ ರೀತಿ ಚಂದ್ರಯಾನ-3ರಂತಹ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಗಳು ವಿಶ್ವದ ಗಮನ ಸೆಳೆದಿವೆ ಎಂದು ಅವರು ಹೇಳಿದರು.
ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ವಿಶ್ವದ ಮುಂಚೂಣಿಯಲ್ಲಿದೆ. ಸಾರ್ವಜನಿಕ ಸೇವೆಗಳನ್ನು ಜನರಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
PublicNext
29/04/2026 11:51 am