ರಾಮೇಶ್ವರಂ : ಅವು ಇನ್ನೂ ಎಳೆಯ ಕೈಗಳು ಆದ್ರೆ ಸಾಧನೆ ಶಿಖರ ಬಹುಬೇಗ ತಲುಪಬೇಕು ಎನ್ನುವ ಹಠ ಛಲ ಮಾತ್ರ ಅಚಲವಾಗಿತ್ತು. ಸಾಧನೆಗೆ ವಯಸ್ಸು ಕೇವಲ ಸಂಖ್ಯೆ ಎನ್ನುವುದಕ್ಕೆ ಕೇವಲ ಏಳು ವರ್ಷದ ಬಾಲಕನೊಬ್ಬ ಅಲೆಗಳ ಆರ್ಭಟದ ನಡುವೆ ಮೈಲುಗಟ್ಟಲೆ ಈಜಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ.
ಹೌದು ಅಲೆಗಳ ಅಬ್ಬರ, ಸಮುದ್ರದ ಭೀಕರ ಸುಳಿಗಳ ನಡುವೆ ಕೇವಲ ಏಳು ವರ್ಷದ ಬಾಲಕನೊಬ್ಬ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಜಾರ್ಖಂಡ್‌ನ ರಾಂಚಿ ಮೂಲದ ಇಶಾಂಕ್ ಸಿಂಗ್, ಶ್ರೀಲಂಕಾ ಮತ್ತು ಭಾರತದ ನಡುವಿನ 29 ಕಿಲೋಮೀಟರ್ ದೂರದ ಪಾಕ್ ಜಲಸಂಧಿಯನ್ನು ಅತ್ಯಂತ ಕಿರಿಯ ವಯಸ್ಸಿನಲ್ಲಿ ಈಜಿ ದಾಟುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ.
ಏಪ್ರಿಲ್ 30, 2026 ರಂದು ಜವಾಹರ್ ವಿದ್ಯಾ ಮಂದಿರದ 3ನೇ ತರಗತಿ ವಿದ್ಯಾರ್ಥಿ, 7 ವರ್ಷದ ಇಶಾಂಕ್ ಸಿಂಗ್ ಈ ಸಾಹಸಕ್ಕೆ ಕೈಹಾಕಿದ್ದಾನೆ. ಶ್ರೀಲಂಕಾದ ತಲೈಮನ್ನಾರ್‌ನಿಂದ ತಮಿಳುನಾಡಿನ ಧನುಷ್ಕೋಡಿಯವರೆಗೆ ಒಟ್ಟು 29 ಕಿಲೋಮೀಟರ್ ದೂರವನ್ನು ಕೇವಲ 9 ಗಂಟೆ 50 ನಿಮಿಷಗಳಲ್ಲಿ ಈಜಿ ಗುರಿ ತಲುಪುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾನೆ.
ಇನ್ನೂ ಇಶಾಂಕ್ ತನ್ನ ಈ ಜಲಸಾಹಸವನ್ನು ಮುಂಜಾನೆ 4 ಗಂಟೆಗೆ ಆರಂಭಿಸಿದ್ದ. ಬಲವಾದ ಗಾಳಿ, ಸಮುದ್ರದ ಪ್ರವಾಹ ಮತ್ತು ಅನಿರೀಕ್ಷಿತ ಹವಾಮಾನದ ಸವಾಲುಗಳನ್ನು ಎದುರಿಸಿ, ಮಧ್ಯಾಹ್ನ 1:50ಕ್ಕೆ ಧನುಷ್ಕೋಡಿಯ ಅರಿಚಲ್ ಮುನೈ ತೀರಕ್ಕೆ ಬಂದು ತಲುಪಿದ್ದಾನೆ. ಈ ಮೂಲಕ 2019ರಲ್ಲಿ 10 ವರ್ಷದ ಜಯ್ ಜಶ್ವಂತ್ ಎಂಬ ಬಾಲಕ ನಿರ್ಮಿಸಿದ್ದ ದಾಖಲೆಯನ್ನು ಇಶಾಂಕ್ ಅಳಿಸಿ ಹಾಕಿದ್ದಾನೆ.
ಇಶಾಂಕ್‌ನ ಈ ಅಪೂರ್ವ ಸಾಧನೆಯನ್ನು 'ಯುನಿವರ್ಸಲ್ ರೆಕಾರ್ಡ್ಸ್ ಫೋರಂ' (URF) ಗುರುತಿಸಿದ್ದು, ಆತನಿಗೆ "ಅತೀ ಕಿರಿಯ ಮತ್ತು ವೇಗದ ಪಾಕ್ ಜಲಸಂಧಿ ಈಜುಗಾರ" ಎಂಬ ಪ್ರಮಾಣಪತ್ರವನ್ನು ನೀಡಿ ಗೌರವಿಸಿದೆ.
"ಇಶಾಂಕ್‌ನ ಈ ಯಶಸ್ಸು ಕೇವಲ ಜಾರ್ಖಂಡ್‌ಗೆ ಮಾತ್ರವಲ್ಲ, ಇಡೀ ಭಾರತಕ್ಕೆ ಹೆಮ್ಮೆಯ ವಿಷಯ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಚಲ ಶಿಸ್ತು ಮತ್ತು ಸಮರ್ಪಣಾ ಭಾವ ತೋರಿರುವುದು ನಿಜಕ್ಕೂ ಸ್ಫೂರ್ತಿದಾಯಕ," ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ.
ಈ ದಾಖಲೆಗಾಗಿ ಇಶಾಂಕ್ ಕಳೆದ ಆರು ತಿಂಗಳಿನಿಂದ ರಾಂಚಿಯ ಧುರ್ವಾ ಅಣೆಕಟ್ಟಿನಲ್ಲಿ ಪ್ರತಿದಿನ 4-5 ಗಂಟೆಗಳ ಕಾಲ ಕಠಿಣ ತರಬೇತಿ ಪಡೆಯುತ್ತಿದ್ದ. ಮೈನಡುಗಿಸುವ ಚಳಿಯಲ್ಲೂ ಆತ ತನ್ನ ಅಭ್ಯಾಸವನ್ನು ಬಿಟ್ಟಿರಲಿಲ್ಲ ಎನ್ನುವುದು ವಿಶೇಷ.
PublicNext
02/05/2026 08:52 am