ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣ್ಣಿನಡಿ ಹೂತುಹಾಕಿದ್ದ ನವಜಾತ ಶಿಶುವನ್ನು ರಕ್ಷಿಸಿದ ಶಾಲಾ ಮಕ್ಕಳು..'ಹುಟ್ಟುವ ಮಗುವಿಗೆ ದೈವವೇ ರಕ್ಷಕ'

ಮೇಘಾಲಯ : ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಕಲ್ಲು ಮನಸ್ಸಿನ ಹೆತ್ತವರು ತಮ್ಮ ನವಜಾತ ಶಿಶುವೊಂದನ್ನು ಜೀವಂತವಾಗಿ ಮಣ್ಣಿನಡಿಯಲ್ಲಿ ಹೂತುಹಾಕಿದ್ದರು. ಆದರೆ, ಶಾಲಾ ಮಕ್ಕಳ ಸಮಯಪ್ರಜ್ಞೆ ಮತ್ತು ಮಾನವೀಯತೆಯಿಂದಾಗಿ ಈ ಪುಟ್ಟ ಜೀವ ಸಾವಿನ ದವಡೆಯಿಂದ ಪಾರಾಗಿ ಹೊಸ ಬದುಕು ಪಡೆದಿದೆ. 'ಹುಟ್ಟುವ ಮಗುವಿಗೆ ದೈವವೇ ರಕ್ಷಕ' ಎಂಬ ನಂಬಿಕೆಯನ್ನು ಈ ಮಕ್ಕಳು ನಿಜವಾಗಿಸಿದ್ದಾರೆ.

ಹೌದು ಶಾಲಾ ಮಕ್ಕಳು ದಾರಿಯಲ್ಲಿ ಹೋಗುತ್ತಿದ್ದಾಗ ಮಣ್ಣಿನ ರಾಶಿಯ ಒಳಗಿನಿಂದ ಮಗುವಿನ ಅಳು ಕೇಳಿಬಂದಿದೆ. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ, ಮಣ್ಣಿನಡಿಯಲ್ಲಿ ಹೂತುಹಾಕಿದ್ದ ಸ್ಥಿತಿಯಲ್ಲಿದ್ದ ನವಜಾತ ಶಿಶು ಕಂಡುಬಂದಿದೆ. ಕೂಡಲೇ ಗಾಬರಿಗೊಂಡ ಮಕ್ಕಳು ತಡಮಾಡದೆ ಮಣ್ಣನ್ನು ಸರಿಸಿ ಮಗುವನ್ನು ಹೊರತೆಗೆದಿದ್ದಾರೆ.

ಮಗುವನ್ನು ರಕ್ಷಿಸಿದ ಮಕ್ಕಳ ಸಾಹಸಕ್ಕೆ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಪ್ರಸ್ತುತ, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.

ಇನ್ನೂ ಈ ಘೋರ ಕೃತ್ಯದ ಬಗ್ಗೆ ಗ್ರಾಮಸ್ಥರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಮಗುವನ್ನು ಈ ರೀತಿ ಮಣ್ಣಿನಡಿಯಲ್ಲಿ ಜೀವಂತವಾಗಿ ಬಿಟ್ಟು ಹೋದವರು ಯಾರು? ಈ ಕ್ರೌರ್ಯದ ಹಿಂದಿರುವವರು ಯಾರು? ಎಂದು ಪ್ರಶ್ನಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಈಗಾಗಲೇ ಈ ಬಗ್ಗೆ ತನಿಖೆ ಆರಂಭಿಸಿದ್ದು, ಮಗುವಿನ ಪೋಷಕರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇಂತಹ ಅಮಾನವೀಯ ಕೃತ್ಯಗಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಿ. ನಿಮ್ಮ ಒಂದು ಕರೆ ಒಂದು ಅಮೂಲ್ಯ ಜೀವವನ್ನು ಉಳಿಸಬಹುದು.

Edited By : Nirmala Aralikatti
PublicNext

PublicNext

30/04/2026 08:30 pm

Cinque Terre

19.61 K

Cinque Terre

0

ಸಂಬಂಧಿತ ಸುದ್ದಿ