ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣೂರು ರಸ್ತೆಯಲ್ಲಿ ಮತ್ತೊಂದು ದುರಂತ: ವೈಟ್ ಟಾಪಿಂಗ್ ಕಾಮಗಾರಿ ಕಾರ ವಿದ್ಯಾರ್ಥಿ ಬಲಿ ಎಂದು ಆಕ್ರೋಶ

ಬೆಂಗಳೂರು: ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯು ಮತ್ತೊಂದು ಅಮೂಲ್ಯ ಜೀವವನ್ನು ಬಲಿ ಪಡೆದಿದೆ. ತಂದೆಗೆ ಮೆಡಿಸನ್ ತರಲು ಹೋಗಿದ್ದ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿ ವರುಣ್, ರಸ್ತೆ ದಾಟುವಾಗ ಖಾಸಗಿ ಬಸ್ ಅಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಎರಡೂ ಕಡೆಯ ವಾಹನಗಳು ಒಂದೇ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ರಸ್ತೆಯುದ್ದಕ್ಕೂ ತೀವ್ರ ವಾಹನದಟ್ಟಣೆ ಮತ್ತು ಕಿರಿಕಿರಿಯನ್ನು ಉಂಟುಮಾಡಿದೆ. ರಸ್ತೆ ದಾಟಲು ಸಾರ್ವಜನಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೇ ಪರಿಸ್ಥಿತಿಯಲ್ಲಿ, ತನ್ನ ತಂದೆಗೆ ಔಷಧ ತರಲು ಬೆಳಗ್ಗೆ 11 ಗಂಟೆಯ ಬಿರುಬಿಸಿಲಿನಲ್ಲಿ ಮೆಡಿಕಲ್ ಶಾಪ್‌ಗೆ ಹೋಗುತ್ತಿದ್ದ ವಿದ್ಯಾರ್ಥಿ ವರುಣ್, ರಸ್ತೆ ದಾಟಲು ಕಾಯುತ್ತಿದ್ದಾಗ ತಲೆಸುತ್ತಿ ಬಿದ್ದಿದ್ದಾನೆ. ರಸ್ತೆ ದಾಟಲು ಕಾಯುತ್ತಿದ್ದಾಗ ತಲೆಸುತ್ತಿ ಬಿದ್ದಿದ್ದ ವರುಣ್, ವೇಗವಾಗಿ ಬಂದ ಖಾಸಗಿ ಬಸ್‌ನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆಯ ಭೀಕರತೆಯನ್ನು ತೋರಿಸುತ್ತದೆ. ವರುಣ್ ಈ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಭರವಸೆಯ ವಿದ್ಯಾರ್ಥಿಯಾಗಿದ್ದ.

ಮಗನನ್ನು ಕಳೆದುಕೊಂಡಿರುವ ವರುಣ್ ಪೋಷಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಈ ವೈಟ್ ಟಾಪಿಂಗ್ ಕಾಮಗಾರಿ ಯಾರಿಗೆ ಬೇಕಿತ್ತು? ನಾವು ಮಣ್ಣಿನ ರಸ್ತೆ, ಡಾಂಬರು ರಸ್ತೆಯಲ್ಲಿಯೇ ಖುಷಿಯಾಗಿದ್ದೆವು. ರಸ್ತೆ ಅಗಲೀಕರಣಕ್ಕಾಗಿ ನಾವೇ ಜಾಗ ಬಿಟ್ಟುಕೊಟ್ಟಿದ್ದೆವು. ಆದರೆ ಈಗ ಮತ್ತೆ ರಸ್ತೆ ಒಡೆದು ವೈಟ್ ಟಾಪಿಂಗ್ ಮಾಡುತ್ತಿದ್ದಾರೆ. ನಮ್ಮ ಮಗ ಇದೇ ರಸ್ತೆ ಕಾಮಗಾರಿ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ.

ಘಟನೆ ನಡೆದ ಬಳಿಕ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರೂ, ಪೊಲೀಸರು ಬಂದು ಅದನ್ನು ನಿಲ್ಲಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವ ಸರ್ಕಾರ, ನಮ್ಮ ಮಗನನ್ನು ಗ್ಯಾರಂಟಿಯಾಗಿ ವಾಪಸ್ ತಂದುಕೊಡುತ್ತದೆಯೇ? ಈ ದುರಂತಕ್ಕೆ ಸರ್ಕಾರ ಮತ್ತು ಸ್ಥಳೀಯ ಪೊಲೀಸರೇ ನೇರಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ತಿಂಗಳಿಂದ ಈ ರಸ್ತೆ ಕೆಲಸ ಪೂರ್ಣಗೊಂಡಿಲ್ಲ. ಹಣ ಸಿಗದ ಕಾರಣ ಗುತ್ತಿಗೆದಾರರು ಕೆಲಸ ನಿಲ್ಲಿಸಿ, ಸ್ವಲ್ಪ ಕೆಲಸ ಮಾಡಿ ಮತ್ತೆ ನಿಲ್ಲಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇಂದು ರಸ್ತೆ ಮಾಡಿದರೆ, ನಾಳೆ ಮತ್ತೊಬ್ಬರು ಬಂದು ಅಗೆಯುತ್ತಾರೆ ಎಂದು ಪೋಷಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 9ನೇ ತರಗತಿಯಲ್ಲಿ ಉತ್ತಮ ರ್ಯಾಂಕ್ ಗಳಿಸಿ 10ನೇ ತರಗತಿಗೆ ಕಾಲಿಡಬೇಕಿದ್ದ ವರುಣ್ ಭವಿಷ್ಯ ಅಪೂರ್ಣವಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ.

ಇದೇ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಮ್ಯಾನ್‌ಹೋಲ್‌ಗೆ ಬಿದ್ದು ಡೆಲಿವರಿ ಬಾಯ್‌ ಒಬ್ಬರು ಟಿಪ್ಪರ್‌ಗೆ ಸಿಲುಕಿ ಮೃತಪಟ್ಟಿದ್ದರು. ಈ ರಸ್ತೆಯಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. ಆ ಘಟನೆಯ ಬಳಿಕ ಸ್ಥಳೀಯರೇ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಿದ್ದರು. ಕಾಮಗಾರಿ ವಿಳಂಬ ಮತ್ತು ಸುರಕ್ಷತಾ ಕ್ರಮಗಳ ಕೊರತೆಯು ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿದೆ ಎಂಬುದು ಸ್ಪಷ್ಟವಾಗಿದೆ.

Edited By : Somashekar
PublicNext

PublicNext

02/05/2026 11:02 am

Cinque Terre

10.86 K

Cinque Terre

3

ಸಂಬಂಧಿತ ಸುದ್ದಿ