ಬೆಂಗಳೂರು: ನಟ ಅಹಿಂಸಾ ಚೇತನ್ ಅವರು ಸಾ.ರಾ. ಗೋವಿಂದು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜನಪರ ಸಂಘಟನೆಗಳೊಂದಿಗೆ ಸೇರಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ಶನಿವಾರ ಸಾ.ರಾ. ಗೋವಿಂದು ತಮ್ಮ ಮನೆ ಬಳಿ ಬಂದು ಅವಾಚ್ಯ ಶಬ್ದಗಳನ್ನು ಬಳಸಿ, ಬೆದರಿಕೆ ಹಾಕಿ ಧಮ್ಕಿ ಹಾಕಿದ್ದಾರೆ ಎಂದು ಚೇತನ್ ಹೇಳಿದ್ದಾರೆ.
ಸಾ.ರಾ. ಗೋವಿಂದು ಅವರ ಹಿನ್ನೆಲೆ ಬೇರೆಯೇ ಇದೆ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಅವರು ಲಂಕೇಶ್ ಪತ್ರಿಕೆ ಕಚೇರಿಗೆ ನುಗ್ಗಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೆ, ಚಿತ್ರರಂಗದಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಡಾ. ರಾಜ್‌ಕುಮಾರ್ ಅವರ ಹೆಸರನ್ನು ಕೆಡಿಸುತ್ತಿದ್ದಾರೆ ಹಾಗೂ ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಅವರಿಗೆ ಯೋಗ್ಯತೆಯಿಲ್ಲ ಎಂದು ಚೇತನ್ ತೀವ್ರವಾಗಿ ಟೀಕಿಸಿದ್ದಾರೆ. ಸಿನಿಮಾ ರಂಗದ ಒಳಿತಿಗಾಗಿ ಯಾರೇ ನಿಂತರೂ ಅವರನ್ನು ಹೆದರಿಸುವುದು, ದಾದಾಗಿರಿ ಮಾಡುವುದು ಹಾಗೂ ದಬ್ಬಾಳಿಕೆ ಮಾಡಿ ಭಯ ಹುಟ್ಟಿಸುವ ಕೆಲಸವನ್ನು ಸಾ.ರಾ. ಗೋವಿಂದು ಮಾಡುತ್ತಾರೆ ಎಂದು ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೇತನ್ ಅವರ ಮನೆ ಬಳಿ ಸಾ.ರಾ. ಗೋವಿಂದು ಮಾತನಾಡಿದಾಗ ಪೊಲೀಸರು ಹಾಗೂ ಮಾಧ್ಯಮದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಧ್ಯಮಗಳಲ್ಲಿ ಅವರ ಮಾತುಗಳು ವರದಿಯಾಗಿವೆ. ಸಾ.ರಾ. ಗೋವಿಂದು ಅವರು ದುರಹಂಕಾರದಿಂದ ಮತ್ತು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಚೇತನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಜನಪರ ಸಂಘಟನೆಗಳು ಸೇರಿ ಸಾ.ರಾ. ಗೋವಿಂದು ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದು, ಪೊಲೀಸರು ದೂರಿನ ಅಕ್ನಾಲೇಜ್‌ಮೆಂಟ್ ನೀಡಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾ.ರಾ. ಗೋವಿಂದು ಅವರ ಮೇಲೆ ದಲಿತರ ವಿರುದ್ಧ ಮಾತನಾಡಿದ್ದ ಆರೋಪವೂ ಇದೆ ಎಂದು ಅಹಿಂಸಾ ಚೇತನ್ ಬಹಿರಂಗಪಡಿಸಿದ್ದಾರೆ. ಈ ಆರೋಪದ ಬಗ್ಗೆಯೂ ತಾವು ಮುಂದೆ ಹೋರಾಟ ಮಾಡುವುದಾಗಿ ಚೇತನ್ ಸ್ಪಷ್ಟಪಡಿಸಿದ್ದಾರೆ.
PublicNext
02/05/2026 03:56 pm