ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ 'ಬ್ರಹ್ಮಾಸ್ತ್ರ' ಪ್ರಯೋಗಿಸಿದೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ ₹993 ಏರಿಕೆ ಮಾಡುವ ಮೂಲಕ ಹೋಟೆಲ್ ಉದ್ಯಮ ಹಾಗೂ ಗ್ರಾಹಕರಿಗೆ ಮರ್ಮಘಾತ ನೀಡಿದೆ. ಕೇಂದ್ರದ ಈ ನಡೆಯನ್ನು ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್, ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಚುನಾವಣೆ ಮುಗಿದ ಕೂಡಲೇ ಬೆಲೆಯೇರಿಕೆ ನಿರೀಕ್ಷಿತವಾಗಿತ್ತು. ಆದರೆ ಒಂದೇ ಬಾರಿ ₹993 ಹೆಚ್ಚಳ ಮಾಡಿರುವುದು ಅನಿರೀಕ್ಷಿತ ಹಾಗೂ ಆಘಾತಕಾರಿ. ವಾಣಿಜ್ಯ LPG ಬೆಲೆ ಏರಿಸಿರುವುದು ಕೇವಲ ಟ್ರೈಲರ್ ಮಾತ್ರ, ಇದು 'ಮುಂದೈತೆ ಮಾರಿಹಬ್ಬ' ಎಂಬ ಅಪಾಯದ ಮುನ್ಸೂಚನೆ" ಎಂದು ಅವರು ಎಚ್ಚರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಸಿಲಿಂಡರ್ ಬೆಲೆಗಳೂ ಸಹ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ವಾಣಿಜ್ಯ LPG ಬೆಲೆಯೇರಿಕೆಯಿಂದಾಗಿ ಬೆಂಗಳೂರಿನಲ್ಲಿ ಒಂದು ಸಿಲಿಂಡರ್ ಬೆಲೆ ಈಗ ₹3,152ಕ್ಕೆ ತಲುಪಿದೆ. ಈ ಏರಿಕೆಯಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಬೆಲೆ ಏರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಇದರ ನೇರ ಪರಿಣಾಮ ಸಾಮಾನ್ಯ ಗ್ರಾಹಕರ ಜೇಬಿನ ಮೇಲೆ ಬೀಳಲಿದೆ.
ಈ ಹಿಂದೆ ಸಿಲಿಂಡರ್ ಬೆಲೆಗಳು ₹50 ಅಥವಾ ₹100ರ ಆಸುಪಾಸಿನಲ್ಲಿ ಹೆಚ್ಚಳವಾಗುತ್ತಿದ್ದವು. ಆದರೆ ಈಗ ಸಾವಿರ ರೂಪಾಯಿಯ ಹತ್ತಿರ (₹993) ಬೆಲೆ ಏರಿಸಿರುವುದನ್ನು ದಿನೇಶ್ ಗುಂಡೂರಾವ್ 'ಹಗಲು ದರೋಡೆ' ಎಂದು ಕರೆದಿದ್ದಾರೆ. ಬಿಜೆಪಿಯವರು ಹೇಳುತ್ತಿದ್ದ ಅಚ್ಛೆ ದಿನ್ ಅಂದರೆ ಇದೇನಾ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಯೇತರ ಸರ್ಕಾರಗಳು ಸ್ವಲ್ಪ ಬೆಲೆ ಏರಿಸಿದರೂ ಬೀದಿಗಿಳಿದು ರಂಪಾಟ ಮಾಡುವ ಬಿಜೆಪಿ ನಾಯಕರು, ಈಗ ಮೋದಿ ಸರ್ಕಾರದ ಬೆಲೆಯೇರಿಕೆಯ ಬಗ್ಗೆ ಮೌನವಾಗಿರುವುದನ್ನು ಗುಂಡೂರಾವ್ ಪ್ರಶ್ನಿಸಿದ್ದಾರೆ. "ಇದು ವಿಷಗುರು ಮೋದಿಯವರ ಮೇಲಿನ ಭಯವೋ ಅಥವಾ ಜನ ಹೇಗಾದರೂ ಸಾಯಲಿ ಎಂಬ ಧಾಡಸಿತನವೋ ಅರ್ಥವಾಗುತ್ತಿಲ್ಲ" ಎಂದು ಅವರು ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ್ದಾರೆ. ಚುನಾವಣೆ ಇಲ್ಲದ ಸಮಯದಲ್ಲಿ ಜನಸಾಮಾನ್ಯರನ್ನು ಲೂಟಿ ಮಾಡುವ ಇಂತಹ ಕ್ರಮಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಚಿವರು ಕಿಡಿಕಾರಿದ್ದಾರೆ.
PublicNext
02/05/2026 11:58 am