ಬೆಂಗಳೂರು: ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಹಾಕಲು ಶುರು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಮೇ 1ರಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏಕಾಏಕಿ ₹993 ಹೆಚ್ಚಿಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಸಿಎಂ, ಕೇಂದ್ರ ಸರ್ಕಾರದ ಆರ್ಥಿಕ ಮತ್ತು ವಿದೇಶಾಂಗ ನೀತಿಗಳ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ ನಿನ್ನೆಯವರೆಗೆ ₹2,078.50 ಇತ್ತು. ಆದರೆ ಇಂದಿನಿಂದ ಇದು ₹3,071.50ಕ್ಕೆ ತಲುಪಿದೆ. ಇದು ಕೇವಲ ಬೆಲೆ ಏರಿಕೆಯಲ್ಲ, ಜನರ ಮೇಲಿನ ಆರ್ಥಿಕ ದಾಳಿ. ಚುನಾವಣೆ ಅವಧಿಯಲ್ಲಿ ಉದ್ದೇಶಪೂರ್ವಕವಾಗಿ ಬೆಲೆ ಏರಿಕೆಯನ್ನು ತಡೆಹಿಡಿಯಲಾಗಿತ್ತು. ಈಗ ಚುನಾವಣೆ ಮುಗಿಯುತ್ತಿದ್ದಂತೆಯೇ ಏಕಾಏಕಿ ದರ ಹೆಚ್ಚಿಸಿರುವುದು ಮೋದಿ ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ ಎಂದು ಸಿಎಂ ಟೀಕಿಸಿದ್ದಾರೆ.
ಕಳೆದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ದರವನ್ನು ಒಟ್ಟು 6 ಬಾರಿ ಹೆಚ್ಚಿಸಿದೆ. ಇದರಿಂದ ಬಳಕೆದಾರರ ಮೇಲೆ ಒಟ್ಟು ₹1,518 ಹೆಚ್ಚುವರಿ ಹೊರೆ ಬಿದ್ದಿದೆ. ಇದನ್ನು 'ಅಧಿಕೃತ ಲೂಟಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನ. ಇದು ಆಡಳಿತವಲ್ಲ, ಜನ ಸಾಮಾನ್ಯರ ಜೇಬಿಗೆ ಹಾಕುತ್ತಿರುವ ಕನ್ನ ಎಂದು ಸಿಎಂ ಕಿಡಿಕಾರಿದ್ದಾರೆ.
PublicNext
02/05/2026 02:26 pm