ಭಟ್ಕಳ: ಕಾರ್ಮಿಕರು ಸೂಚಿಸುವ ಜಾಗದಲ್ಲಿಯೇ ಕಾರ್ಮಿಕರ ತಂಗುದಾಣ ನಿರ್ಮಿಸಿಕೊಡಲಾಗುವುದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕ ಸಂಘ ಹುರುಳಿಸಾಲು ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಸಂಘದ ದಶಮಾನೋತ್ಸವ ಕಾರ್ಯಕ್ರಮವು ಶುಕ್ರವಾರ ಹೆಬಳೆ ಗಾಂಧಿನಗರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ರೈತರು ಆಹಾರ ಬೆಳೆದು ಕೊಟ್ಟರೆ ಕಾರ್ಮಿಕರು ಮನೆ ಹಾಗೂ ಕಟ್ಟಡ ನಿರ್ಮಿಸಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಬಾಕಿ ಇರುವ 1 ಸಾವಿರ ಕಿಟ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ವಿತರಿಸಲಾಗುವುದು. ಕೆಲಸವಿಲ್ಲದ ಎರಡು ತಿಂಗಳ ಅವಧಿಯಲ್ಲಿ ಕಾರ್ಮಿಕರಿಗೆ ₹3 ಸಾವಿರ ಸಹಾಯಧನ ನೀಡುವ ಕುರಿತು ಕಾರ್ಮಿಕ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಕಲಿ ಕಾರ್ಮಿಕ ಕಾರ್ಡ್‌ಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಹೊಸ ಯೋಜನೆಯಡಿ ₹115 ಕೋಟಿ ವೆಚ್ಚದಲ್ಲಿ 1ರಿಂದ 12ನೇ ತರಗತಿ ತನಕ ಕಾರ್ಮಿಕರ ಮಕ್ಕಳಿಗೆ ಪುಸ್ತಕ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುವುದು ಎಂದರು.
ಒಂದು ವರ್ಷದೊಳಗೆ ಕಾರ್ಮಿಕರ ಶಾಲೆಭಟ್ಕಳದಲ್ಲಿ ಒಂದು ವರ್ಷದೊಳಗೆ ಕಾರ್ಮಿಕರ ಶಾಲೆ ಆರಂಭಿಸಲಾಗುವುದು. ಕಟ್ಟಡ ಕಾಮಗಾರಿ ಶೀಘ್ರ ಆರಂಭವಾಗಲಿದೆ.
ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ಅಧಿಕಾರಿಗಳಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ₹8 ಲಕ್ಷ, ಸಣ್ಣ ಗಾಯಗಳಿಗೆ ₹1.50 ಲಕ್ಷ ಪರಿಹಾರ ನೀಡಲಾಗುವುದು. 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ತನಕ ₹1,800ರಿಂದ ₹50 ಸಾವಿರವರೆಗೆ ಶೈಕ್ಷಣಿಕ ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಮಾತನಾಡಿ, ಕಾರ್ಮಿಕರ ಶ್ರಮವನ್ನು ಸಮಾಜ ಸದಾ ಗೌರವಿಸಬೇಕು ಎಂದರು.ಭಟ್ಕಳ ಡಿವೈಎಸ್ಪಿ ಎಂ. ಗಿರೀಶ್ ಮಾತನಾಡಿ, ಕಾರ್ಮಿಕರ ದುಡಿಮೆ ಅಮೂಲ್ಯವಾದದ್ದು. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಭಟ್ಕಳ ಅಧ್ಯಕ್ಷ ಮೋಹನ್ ನಾಯ್ಕ ಮಾತನಾಡಿ, ನೋಂದಣಿ ಮಾಡಿಸದ ಕಾರ್ಮಿಕರನ್ನು ಗುರುತಿಸಿ ಸಂಘಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಳಿದರು.ನ್ಯಾಯವಾದಿ ಮಂಜುನಾಥ ಗೊಂಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ನಿಧಿ ರಚಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
02/05/2026 07:36 pm