ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: ಹವ್ಯಕ ಭವನ ಲೋಕಾರ್ಪಣೆ : ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ - ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಭಟ್ಕಳದ ಶ್ರೀ ಕ್ಷೇತ್ರ ಬೆಳಕೆ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಅಖಿಲ ಹವ್ಯಕ ಮಹಾಸಭೆ ನಿರ್ಮಿಸಿರುವ ಹವ್ಯಕ ಭವನವನ್ನು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಲೋಕಾರ್ಪಣೆ ಮಾಡಿದರು.ನಂತರ ಆಶೀರ್ವಚನ ನೀಡಿದ ಅವರು, ಬೆಳಕೆ ದುರ್ಗಾಪರಮೇಶ್ವರಿ ಕ್ಷೇತ್ರವು ಪ್ರವರ್ಧಮಾನಕ್ಕೆ ಬರಲು ವಿಶೇಷ ಕಾರಣಗಳಿವೆ ಎಂದು ಹೇಳಿದರು. “ಈ ಕ್ಷೇತ್ರದ ಬೆಳವಣಿಗೆಯಲ್ಲಿ ಬಿಲ್ಲವ ಸಮುದಾಯ, ಸ್ಥಳೀಯ ಬೆಂಬಲಿಗರು, ಶ್ರೀ ಮಠ ಹಾಗೂ ಅಖಿಲ ಹವ್ಯಕ ಮಹಾಸಭೆಯ ಪಾತ್ರ ಮಹತ್ವದ್ದಾಗಿದೆ” ಎಂದರು.“ಹಿಂದೆ ಬಿಲ್ಲವ ಸಮುದಾಯದ ಸಂಕಷ್ಟ ಪರಿಹಾರವಾಗಬೇಕೆಂಬ ಉದ್ದೇಶದಿಂದ ಭೂಮಿ ಪಡೆಯಲಾಗಿತ್ತು. ಇಂದು ಅವರ ಸಂಕಷ್ಟ ನಿವಾರಣೆಯಾಗಿದ್ದು, ಅಖಿಲ ಹವ್ಯಕ ಮಹಾಸಭೆ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡ ಬಳಿಕ ಹಂತ ಹಂತವಾಗಿ ಅಭಿವೃದ್ಧಿ ಕಂಡಿದೆ. ಮುಂದಿನ ದಿನಗಳಲ್ಲಿ ಇದು ಭವ್ಯ ಕ್ಷೇತ್ರವಾಗಿ ಗುರುತಿಸಿಕೊಳ್ಳಲಿದೆ” ಎಂದು ಹೇಳಿದರು.ಅಖಿಲ ಹವ್ಯಕ ಮಹಾಸಭೆ ನಿರ್ಮಿಸಿರುವ ಸಭಾಭವನ ಈ ಭಾಗದ ಜನತೆಗೆ ಉಪಯೋಗವಾಗಲಿದೆ. ಜೊತೆಗೆ ದೂರದಿಂದ ಶ್ರೀ ಮಠಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಅರವಟ್ಟಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆ ಶ್ಲಾಘನೀಯ ಎಂದು ಹೇಳಿದರು.ಈ ಭಾಗದ ಅಭಿವೃದ್ಧಿಗೆ ಸಚಿವ ಮಂಕಾಳ ವೈದ್ಯ ಅವರ ಕೊಡುಗೆ ದೊಡ್ಡದು. ಅವರು ಸಮರ್ಪಣಾ ಭಾವದಿಂದ ಶ್ರೀ ಮಠದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಬಿಲ್ಲವ ಸಮುದಾಯದ ವ್ಯಕ್ತಿಯೊಬ್ಬರು ಹವ್ಯಕ ಸಮಾಜಕ್ಕೆ ಭೂದಾನ ನೀಡಿರುವುದು ಸಾಮರಸ್ಯದ ಸಂಕೇತ ಎಂದರು.“ಈ ಭಾಗದ ಜನರ ಉಪಯೋಗಕ್ಕಾಗಿ ನಿರ್ಮಿಸಿರುವ ಭವನದಲ್ಲಿ ಒಂದು ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ.

ಈಗಾಗಲೇ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸಿ ದೂರದಿಂದ ಬರುವವರಿಗೆ ತಂಗುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ” ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಚಿವ ಮಂಕಾಳ ವೈದ್ಯ ಮಾತನಾಡಿ, ಕರಾವಳಿ ಭಾಗಕ್ಕೆ ಅಖಿಲ ಹವ್ಯಕ ಮಹಾಸಭೆ ತನ್ನ ಸೇವೆಯನ್ನು ವಿಸ್ತರಿಸಿರುವುದು ಶ್ಲಾಘನೀಯ ಎಂದು ಹೇಳಿದರು.“ಇಲ್ಲಿ ಬರುವವರಿಗೆ ಕೇವಲ ವಿಶ್ರಾಂತಿ ಮಾತ್ರವಲ್ಲ, ಊಟೋಪಚಾರ ವ್ಯವಸ್ಥೆಯನ್ನೂ ಕಲ್ಪಿಸಲು ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮೋಹನ ಭಾಸ್ಕರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿದರು. ವೇದಿಕೆಯಲ್ಲಿ ಮಹಾಸಭೆಯ ಆದಿತ್ಯ ಉಪಸ್ಥಿತರಿದ್ದರು.ಅಧ್ಯಕ್ಷ ಡಾ. ಗಿರಿಧರ ಕಜೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ ಭಟ್ಟ ವಂದಿಸಿದರು.

Edited By : PublicNext Desk
Kshetra Samachara

Kshetra Samachara

02/05/2026 07:39 pm

Cinque Terre

2.42 K

Cinque Terre

0

ಸಂಬಂಧಿತ ಸುದ್ದಿ