ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

​ಚಿತ್ರದುರ್ಗ: ಹಳೆ ದ್ವೇಷಕ್ಕೆ ಖಾಸಗಿ ಬಸ್ ಉದ್ಯೋಗಿಯ ಭೀಕರ ಕೊಲೆ; ಸ್ಥಳಕ್ಕೆ ಡಿವೈಎಸ್‌ಪಿ ಭೇಟಿ

​ಚಿತ್ರದುರ್ಗ: ಚಿತ್ರದುರ್ಗ ನಗರದ ಉಮರ್ ಸರ್ಕಲ್ ಬಳಿಯ ರಾಮದಾಸ್ ಕಾಂಪೌಂಡ್‌ನಲ್ಲಿ ಭೀಕರ ಕೊಲೆಯೊಂದು ಸಂಭವಿಸಿದೆ. ಖಾಸಗಿ ಬಸ್ ಕಂಪನಿಯ ಉದ್ಯೋಗಿಯಾದ ಪ್ರಮೋದ್ ಬಾಬು (45) ಎಂಬುವವರನ್ನು ದುಷ್ಕರ್ಮಿಗಳು ಅತಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ.

​ರಾತ್ರಿ ಊಟ ಮುಗಿಸಿ ಮನೆಯಲ್ಲಿ ವಿಶ್ರಮಿಸುತ್ತಿದ್ದ ವೇಳೆ ಮನೆಗೆ ನುಗ್ಗಿದ ಆಗಂತುಕರು, ಪ್ರಮೋದ್ ಬಾಬು ಅವರ ಮೇಲೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ. ಅಷ್ಟೇ ಅಲ್ಲದೆ, ಮೃತದೇಹ ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಭೀಕರ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

​​ಮೃತ ಪ್ರಮೋದ್ ಬಾಬು ಅವರು ವಿಜಯಲಕ್ಷ್ಮಿ ಎಂಬುವವರ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು ಎನ್ನಲಾಗಿದೆ. ವಿಜಯಲಕ್ಷ್ಮಿ ಅವರ ಪುತ್ರಿಯ ಮದುವೆ ವಿಚಾರವಾಗಿ ಪ್ರಮೋದ್ ಅವರಿಗೆ ಈ ಹಿಂದೆ ಕೆಲವರು ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ. ಈ ವಿಚಾರವಾಗಿ ಆಗಾಗ ಫೋನ್‌ನಲ್ಲಿ ಗಲಾಟೆಗಳು ನಡೆಯುತ್ತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಳೆ ದ್ವೇಷ ಕೊಲೆಯಲ್ಲಿ ಅಂತ್ಯವಾಗಿರುವ ಶಂಕೆ ವ್ಯಕ್ತವಾಗಿದೆ.

​ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಅರುಣ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳಿವು ಪತ್ತೆ ಹಚ್ಚಲು ಎಫ್‌ಎಸ್‌ಎಲ್‌ (FSL) ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Edited By : Vinayak Patil
PublicNext

PublicNext

03/05/2026 05:38 pm

Cinque Terre

12.23 K

Cinque Terre

0

ಸಂಬಂಧಿತ ಸುದ್ದಿ