ಆಗ್ರಾ: ತನ್ನದೇ ಕುಟುಂಬಕ್ಕೆ ಸೇರಿದ ಹೊಲದಿಂದ ಕಲ್ಲಂಗಡಿ ಹಣ್ಣು ಕಿತ್ತಿದ್ದನೆಂಬ ಕ್ಷುಲ್ಲಕ ಕಾರಣಕ್ಕೆ 13 ವರ್ಷದ ಬಾಲಕನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಶುಕ್ರವಾರ ಆಗ್ರಾದ ಬಸಾಯಿ ಜಾಗ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಿ ಖೇಡಾ ಗ್ರಾಮದಲ್ಲಿ ನಡೆದಿದೆ.
ಬಾಲಕನ ಕುಟುಂಬವು ತಮ್ಮ ಹೊಲವನ್ನು ಪಾಲುದಾರರಿಗೆ ಗೇಣಿಗೆ ನೀಡಿತ್ತು. ಕಲ್ಲಂಗಡಿ ಹಣ್ಣು ಕಿತ್ತಿರುವುದಕ್ಕೆ ಆ ಪಾಲುದಾರರೇ ಬಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿ, ಆರೋಪಿಗಳಾದ ರಿಯಾಝುದ್ದೀನ್ ಹಾಗೂ ಶಿರಾಝುದ್ದೀನ್‌ನನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಆಗ್ರಾ ಡಿಸಿಪಿ (ಪಶ್ಚಿಮ) ಆದಿತ್ಯ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಬಾಲಕನ ಕುಟುಂಬದ ಮಾಲಕತ್ವದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು ಹಾಗೂ ಕುಟುಂಬದೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದರು.
ಈ ಘಟನೆಯಿಂದಾಗಿ ಗ್ರಾಮದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
03/05/2026 06:23 pm
LOADING...