ಕಾಗವಾಡ: ತಾಲೂಕಿನ ಮಂಗಸೂಳಿ ಹೊರವಲಯದಲ್ಲಿ ಬಿಸಿಲಿನ ಕಾವು ರೈತನ ಹೂದೋಟವನ್ನೇ ಬಾಡಿಸಿಬಿಟ್ಟಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗುಲಾಬಿ ಹೂವಿನ ತೋಟ ಈಗ ಒಣಗಿ ನಿಂತಿದ್ದು, ಅರಳಬೇಕಿದ್ದ ಹೂವು ಮುದುಡಿಕೊಂಡು ಗಿಡದಲ್ಲೇ ಒಣಗುತ್ತಿದೆ. ಬೆಳಗ್ಗೆಯಿಂದಲೇ ಬಿಸಿಲಿನ ಕಾವು ಏರುತ್ತಿದ್ದು, ಮಧ್ಯಾಹ್ನ ಹೊತ್ತಿಗೆ ಹೊಲದ ಮಣ್ಣೇ ಸುಡುವಂತಾಗಿದೆ. ಇದರಿಂದ ಹೂ ಬೆಳೆ ಸಂಪೂರ್ಣ ಕೈಕೊಟ್ಟಂತಾಗಿ ರೈತ ಕಂಗಾಲಾಗಿದ್ದಾನೆ.
ನೀರು ಕಡಿಮೆ ಆಗಬಾರದೆಂದು ರೈತ ಹಗಲು-ರಾತ್ರಿ ತೋಟಕ್ಕೆ ನೀರು ಹರಿಸಿದ್ದಾನೆ. ಆದರೂ ಬಿಸಿಲಿನ ಝಳಕ್ಕೆ ಗಿಡಗಳು ತಾಳದೆ ಸುಸ್ತಾಗಿವೆ. ಮೊಗ್ಗು ಬಿಟ್ಟ ಹೂವು ಅರಳುವ ಮುಂಚೆ ಬಾಡಿ ಹೋಗುತ್ತಿವೆ. ಅರಳಿದ ಹೂವು ಮಧ್ಯಾಹ್ನಕ್ಕೆ ತಲೆತಗ್ಗಿಸಿ ನೆಲಕ್ಕೆ ಬೀಳುತ್ತಿವೆ. ಮಾರುಕಟ್ಟೆಗೆ ಕಳುಹಿಸುವ ಹೂ ತೋಟದಲ್ಲೇ ಹಾಳಾಗುತ್ತಿದ್ದು, ಕೂಲಿ ಖರ್ಚು ಕೂಡ ಕೈಗೆ ಸಿಗದ ಸ್ಥಿತಿ ಬಂದಿದೆ.
“ಈ ಸಾರಿ ಬಿಸಿಲು ಗುಲಾಬಿ ಬೆಳೆಗೇ ಹೊಡೆತ ಕೊಟ್ಟಿದೆ” ಎಂದು ರೈತರು ಬೇಸರ ಹೊರಹಾಕುತ್ತಿದ್ದಾರೆ. ಮದುವೆ, ಪೂಜೆ, ಜಾತ್ರೆ ಸೀಸನ್‌ನಲ್ಲಿ ಒಳ್ಳೆಯ ದರ ತರುತ್ತಿದ್ದ ಗುಲಾಬಿ ಈಗ ಮೂಡಿ ಸೇರದೆ ತೋಟದಲ್ಲೇ ಒಣಗುತ್ತಿದೆ. ಕೈಗೆ ಬರಬೇಕಿದ್ದ ಹಣ ಕಣ್ಣೆದುರೇ ಕರಗುತ್ತಿರುವುದನ್ನು ನೋಡಿ ರೈತನ ಎದೆ ಸುಡುತ್ತಿದೆ. ಇನ್ನೂ ಎರಡು ದಿನ ಮಳೆ ಬೀಳದಿದ್ದರೆ ಉಳಿದ ಗಿಡಗಳೂ ಸಂಪೂರ್ಣ ಒಣಗಿ ಹೋಗುವ ಭೀತಿ ರೈತರನ್ನು ಕಾಡುತ್ತಿದೆ.
PublicNext
03/05/2026 06:33 pm
LOADING...