ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದನ್ನು ಖಂಡಿಸಿ, ಮೇ 7ರಂದು ಸಾಗರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಇಂದೂಧರ ಗೌಡ ಅವರು, ಬೇಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 3200 ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವುದಲ್ಲದೆ, ಜನರ ಜೀವನಕ್ಕೆ ಭಾರೀ ಅಪಾಯ ಕಾದಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಯೋಜನೆಯು ಜಾರಿಯಾದಲ್ಲಿ ಬೇಸೂರು ಮತ್ತು ಸುತ್ತಮುತ್ತಲ ಗ್ರಾಮಗಳ ಸುಮಾರು 177 ಕುಟುಂಬಗಳು ಬೀದಿಗೆ ಬೀಳುವ ಭೀತಿಯಲ್ಲಿದ್ದು, ನೂರಾರು ಎಕರೆ ಅಡಿಕೆ ತೋಟ ಹಾಗೂ ಕೃಷಿ ಭೂಮಿ ನಾಶವಾಗಲಿದೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಈಗಾಗಲೇ ಲಿಂಗನಮಕ್ಕಿ ಮತ್ತು ಮಡೇನೂರು ಅಣೆಕಟ್ಟು ಯೋಜನೆಗಳಿಂದ ಸರ್ವಸ್ವವನ್ನೂ ಕಳೆದುಕೊಂಡಿರುವ ಮಲೆನಾಡಿನ ರೈತರಿಗೆ ಈ ಹೊಸ ಯೋಜನೆ 'ಗಾಯದ ಮೇಲೆ ಬರೆ' ಎಳೆದಂತಾಗಲಿದೆ. ಸ್ಥಳೀಯ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯೋಜನೆಯನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದ್ದಾರೆ ಎಂದು ಗೌಡರು ಮಾಹಿತಿ ನೀಡಿದರು.
ಮೇ 7ರಂದು ಬೆಳಿಗ್ಗೆ 10 ಗಂಟೆಗೆ ಸಾಗರದ ಶಿವಪ್ಪ ನಾಯಕ ವೃತ್ತದಿಂದ ಆರಂಭವಾಗಲಿರುವ ಈ ಬೃಹತ್ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಗಾಂಧಿ ಮೈದಾನದಲ್ಲಿ ಬೃಹತ್ ಸಭೆಯಾಗಿ ರೂಪಗೊಳ್ಳಲಿದೆ. ಈ ಹೋರಾಟಕ್ಕೆ ಸಾಹಿತಿಗಳು, ಪರಿಸರವಾದಿಗಳು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪಕ್ಷಾತೀತವಾಗಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಲಾಗಿದೆ. ಒಂದು ವೇಳೆ ಸರ್ಕಾರ ಈ ಕೂಡಲೇ ಈ ವಿಧ್ವಂಸಕಾರಿ ಯೋಜನೆಯನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
Kshetra Samachara
04/05/2026 08:03 pm