ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿ ದಾಟಲು ಹೋಗಿ ಎಕ್ಸ್‌ಪ್ರೆಸ್‌ಗೆ ಇಬ್ಬರು ಮಹಿಳೆಯರು ಬಲಿ

ಪಾಟ್ನಾ (ಬಿಹಾರ): ಬಿಹಾರದ ಬಖ್ತಿಯಾರ್‌ಪುರ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಭೀಕರ ದುರಂತವೊಂದು ಸಂಭವಿಸಿದೆ. ರೈಲ್ವೆ ಹಳಿಗಳನ್ನು ದಾಟಲು ಯತ್ನಿಸಿದ ಇಬ್ಬರು ಮಹಿಳೆಯರು ಅತಿ ವೇಗವಾಗಿ ಬಂದ ಫರಕ್ಕಾ ಎಕ್ಸ್‌ಪ್ರೆಸ್‌ಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೆಟ್ಟಿಲುಗಳ ಮೇಲ್ಸೇತುವೆ ಬಳಸದೆ, ರೈಲ್ವೆ ಹಳಿಗಳನ್ನು ದಾಟುವ ನಿರ್ಲಕ್ಷ್ಯವೇ ಈ ಇಬ್ಬರು ಮಹಿಳೆಯರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿದೆ.

ಹೌದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳ ಪ್ರಕಾರ, ಇಬ್ಬರು ಮಹಿಳೆಯರು ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ತಲುಪಲು ರೈಲ್ವೆ ಹಳಿಗಳನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಅವರಿಗೆ ಹಳಿ ದಾಟಲು ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ದುರದೃಷ್ಟವಶಾತ್, ಅದೇ ಸಮಯದಲ್ಲಿ ನವದೆಹಲಿ - ಮಾಲ್ಡಾ ಟೌನ್ ಫರಕ್ಕಾ ಎಕ್ಸ್‌ಪ್ರೆಸ್ (14004) ರೈಲು ಅತಿ ವೇಗವಾಗಿ ಬಂದಿದ್ದು, ಹಳಿ ದಾಟುತ್ತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ.

ರೈಲು ಹತ್ತಿರ ಬರುತ್ತಿರುವುದನ್ನು ಗಮನಿಸಿದ ಪ್ಲಾಟ್‌ಫಾರ್ಮ್ ಮೇಲಿದ್ದ ಪ್ರಯಾಣಿಕರು ಮಹಿಳೆಯರನ್ನು ಎಚ್ಚರಿಸಲು ಕೂಗಾಡಿದ್ದಾರೆ ಹಾಗೂ ಅವರನ್ನು ಮೇಲೆಳೆಯಲು ಕೈ ಚಾಚಿದ್ದಾರೆ. ಆದರೆ, ಕೇವಲ ಸೆಕೆಂಡುಗಳ ಅಂತರದಲ್ಲಿ ರೈಲು ರಭಸವಾಗಿ ಮಹಿಳೆಯರಿಗೆ ಅಪ್ಪಳಿಸಿ ಮುಂದೆ ಸಾಗಿದೆ. ಅವರಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ಮಹಿಳೆಯರನ್ನು ಗಯಾ ಜಿಲ್ಲೆಯ ಮನ್‌ಪುರದ ಇಂತರ್ ದೇವಿ (62) ಮತ್ತು ಅಥಮಲ್ಗೋಲಾದ ಸಂಗೀತಾ ದೇವಿ (45) ಎಂದು ಗುರುತಿಸಲಾಗಿದೆ. ಇಂತರ್ ದೇವಿ ಅವರು ತಮ್ಮ ಸಹೋದರಿಯ ಮಗಳಾದ ಸಂಗೀತಾ ಅವರನ್ನು ರೈಲು ನಿಲ್ದಾಣಕ್ಕೆ ಬಿಡಲು ಬಂದಾಗ ಈ ದುರ್ಘಟನೆ ಸಂಭವಿಸಿದೆ. ಈ ಅಪಘಾತದಿಂದಾಗಿ ರೈಲ್ವೆ ಸಂಚಾರ ಅರ್ಧ ಗಂಟೆ ಸ್ಥಗಿತಗೊಂಡಿತ್ತು.

ರೈಲ್ವೆ ಹಳಿಗಳನ್ನು ದಾಟುವುದು ಕಾನೂನುಬಾಹಿರ ಮಾತ್ರವಲ್ಲ, ಅದು ನಿಮ್ಮ ಜೀವಕ್ಕೆ ಅತ್ಯಂತ ಅಪಾಯಕಾರಿ. ದಯವಿಟ್ಟು ಯಾವಾಗಲೂ ಫುಟ್ ಓವರ್‌ಬ್ರಿಡ್ಜ್‌ಗಳನ್ನೇ ಬಳಸಿ. ನಿಮ್ಮ ಒಂದು ನಿಮಿಷದ ಅವಸರ ಇಡೀ ಕುಟುಂಬಕ್ಕೆ ಆಜೀವನ ದುಃಖ ತರಬಹುದು ಎಂದು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

Edited By : Nirmala Aralikatti
PublicNext

PublicNext

05/05/2026 06:04 pm

Cinque Terre

14.12 K

Cinque Terre

0

ಸಂಬಂಧಿತ ಸುದ್ದಿ