ಬೆಂಗಳೂರು: ಡೇಟಿಂಗ್ ಆ್ಯಪ್‌ಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂಬುದಕ್ಕೆ ಮತ್ತೊಂದು ಉದಾಹರಣೆ ಈ ಘಟನೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಭೇಟಿಯಾಗಲು ಹೋಗಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಹಣ ಕಳೆದುಕೊಂಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ.
ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, Grindr ಎಂಬ ಸಲಿಂಗಕಾಮಿಗಳು ಬಳಸುವ ಡೇಟಿಂಗ್ ಆ್ಯಪ್ ಅನ್ನು ಕಳೆದ ಒಂದೂವರೆ ವರ್ಷದಿಂದ ಬಳಸುತ್ತಿದ್ದ ಇಂಜಿನಿಯರ್ ಒಬ್ಬರು ಬಲಿಯಾಗಿದ್ದಾರೆ. ಈ ಆ್ಯಪ್ ಮೂಲಕ ಹಲವರು ಪರಸ್ಪರ ಸಂಪರ್ಕ ಸಾಧಿಸುತ್ತಾರೆ. ಇತ್ತೀಚೆಗೆ ಈ ಇಂಜಿನಿಯರ್‌ಗೆ ಆ್ಯಪ್ ಮೂಲಕ ಯುವಕನೊಬ್ಬನ ಪರಿಚಯವಾಗಿದೆ. ನಂತರ ಇಬ್ಬರೂ ತಮ್ಮ ಮೊಬೈಲ್ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಮೇ 1 ರಂದು ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲನಹಳ್ಳಿ ಗೇಟ್ ಬಳಿ ಭೇಟಿಯಾಗುವಂತೆ ಆ ಯುವಕ ಇಂಜಿನಿಯರ್ ಅನ್ನು ಕರೆದಿದ್ದಾನೆ. ಅದರಂತೆ, ಇಂಜಿನಿಯರ್ ಆ ಯುವಕನನ್ನು ಭೇಟಿಯಾಗಲು ತೆರಳಿದ್ದಾರೆ. ಈ ವೇಳೆ, ಅಲ್ಲಿ ನಾಲ್ವರು ಆರೋಪಿಗಳು ಇಂಜಿನಿಯರ್‌ಗಾಗಿ ಕಾಯುತ್ತಿದ್ದರು. ಅವರು ಇಂಜಿನಿಯರ್ ಅನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ನೀನು ಸಲಿಂಗಕಾಮಿ ಎಂದು ಎಲ್ಲೆಡೆ ಪ್ರಚಾರ ಮಾಡುತ್ತೇವೆ ಎಂದು ಬೆದರಿಸಿ, ಅವರ ಮೊಬೈಲ್ ಕಿತ್ತುಕೊಂಡು, ಮೊಬೈಲ್ ಮತ್ತು ಯುಪಿಐ ಪಾಸ್‌ವರ್ಡ್ ಹೇಳುವಂತೆ ಒತ್ತಾಯಿಸಿದ್ದಾರೆ.
ಇಂಜಿನಿಯರ್ ಮೊಬೈಲ್ ಪಾಸ್‌ವರ್ಡ್ ಹೇಳಲು ನಿರಾಕರಿಸಿದಾಗ, ಪುಂಡರು ಅವರ ತೊಡೆಗೆ ಚಾಕುವಿನಿಂದ ಇರಿದಿದ್ದಾರೆ. ಅಷ್ಟೇ ಅಲ್ಲದೆ, ಅವರ ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ, ಬಲವಂತವಾಗಿ ಮೊಬೈಲ್ ಕಸಿದುಕೊಂಡು, ಯುಪಿಐ ಮೂಲಕ 16 ಸಾವಿರ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ಸುಲಿಗೆ ಮಾಡಿದ ನಂತರ, ಆರೋಪಿಗಳು ಇಂಜಿನಿಯರ್ ಅನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಇಂಜಿನಿಯರ್ ನಂತರ ತಮ್ಮ ಸ್ನೇಹಿತನಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ, ಆರೋಪಿಗಳಾದ ದರ್ಶನ್ ಮತ್ತು ರಾಜೇಶ್ ಎಂಬುವವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಬಾಲಕರನ್ನು ಕಾನೂನು ಸಂಘರ್ಷಕ್ಕೆ ಒಳಪಡಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಪೊಲೀಸರ ತನಿಖೆಯಿಂದ ತಿಳಿದುಬಂದಿರುವ ಪ್ರಕಾರ, ಈ ಹಿಂದೆಯೂ ಇದೇ ಆ್ಯಪ್ ಮೂಲಕ ಎಂಟಕ್ಕೂ ಹೆಚ್ಚು ಜನರಿಗೆ ಈ ತಂಡ ಸುಲಿಗೆ ಮಾಡಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ನಾಲ್ಕು ಮೊಬೈಲ್‌ಗಳು ಮತ್ತು ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಯಲಹಂಕ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
PublicNext
06/05/2026 10:08 am