ಧಾರವಾಡ: 2016-17ನೇ ಇಸ್ವಿಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಬಹುಕೋಟಿ ವಂಚನೆ ಪ್ರಕರಣವೊಂದು ನಡೆದಿತ್ತು. ಹರ್ಷಾ ಎಂಟರ್‌ಪ್ರೈಸಸ್ ಪ್ರೈ.ಲಿ. ಹೆಸರಿನಲ್ಲಿ ಕಾಸ್ನೀಸ್ ಎಂಬ ಇಬ್ಬರು ಸಹೋದರರು ನೂರಾರು ಜನರಿಂದ ಹಣ ಸಂಗ್ರಹಿಸಿ ಅವರಿಗೆ ವಂಚಿಸಿದ್ದರು.
ಇವರಿಂದ ವಂಚನೆಗೊಳಗಾದ ಜನ ಇದೀಗ ಪರಿಹಾರಕ್ಕಾಗಿ ಧಾರವಾಡ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಹೌದು! 2016-17 ರಲ್ಲಿ ಕಾಸ್ನೀಸ್ ಬ್ರದರ್ಸ್ ತಮ್ಮ ಹರ್ಷಾ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಕಲಘಟಗಿ ಅಷ್ಟೇ ಅಲ್ಲದೇ ಧಾರವಾಡ ಜಿಲ್ಲೆಯ ಅನೇಕ ಜನರಿಂದ ಹಣ ಪಡೆದು ಅದನ್ನು ಡಬಲ್ ಮಾಡಿಕೊಡುವುದಾಗಿ ಹೇಳಿ ವಂಚಿಸಿದ್ದರು. ಇದು ಬಹುಕೋಟಿ ವಂಚನೆ ಪ್ರಕರಣವಾಗಿತ್ತು. ಹಣ ಡಬಲ್ ಮಾಡಿಕೊಡುವುದು ಹಾಗೂ ಸಿನಿಮಾ ಪ್ರೊಡ್ಯೂಸ್ ಮಾಡುವುದು ಈ ವಂಚನೆಯ ಭಾಗವಾಗಿತ್ತು.
ಸಾವಿರಾರು ಜನರಿಂದ ಹಣ ಪಡೆದಿದ್ದ ಕಾಸ್ನೀಸ್ ಬ್ರದರ್ಸ್ ಜನರಿಗೆ ಪಂಗನಾಮ ಹಾಕಿ ತೆರಳಿದ್ದರು. ಇದು ವಂಚನೆ ಎಂದು ಗೊತ್ತಾದ ಕೂಡಲೇ ರೊಚ್ಚಿಗೆದ್ದಿದ್ದ ಜನ ಹರ್ಷಾ ಕಂಪೆನಿ ಮೇಲೆ ದೂರು ದಾಖಲಿಸಿದ್ದರು. ಜನ ಕೊಟ್ಟ ದೂರಿನ ಮೇರೆಗೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ನೀಡಿತ್ತು.
ಸಿಐಡಿ ತನಿಖೆಯಲ್ಲಿ ಇದು ಬಹುಕೋಟಿ ವಂಚನೆಯಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಕೂಡಲೇ ಕಾಸ್ನೀಸ್ ಬ್ರದರ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಧಾರವಾಡ ಜಿಲ್ಲಾಡಳಿತ ಕಾಸ್ನೀಸ್ ಬ್ರದರ್ಸ್‌ಗಳ ಸ್ಥಿರಾಸ್ತಿ ಹಾಗೂ ಚರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಆ ಮೂಲಕ ಕಾಸ್ನೀಸ್ ಬ್ರದರ್ಸ್‌ಗಳಿಂದ ವಂಚನೆಗೊಳಗಾದವರಿಂದ ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಿದೆ. ಅಗತ್ಯ ದಾಖಲೆಗಳೊಂದಿಗೆ ವಂಚನೆಗೊಳಗಾದವರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದ ನೂರಾರು ಜನ ತಮ್ಮ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.
ಸದ್ಯ ಕಾಸ್ನೀಸ್ ಬ್ರದರ್ಸ್ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು, ಅದರ ಆಧಾರದ ಮೇಲೆ ವಂಚನೆಗೊಳಗಾದ ಜನರಿಗೆ ಸರ್ಕಾರ ಪರಿಹಾರ ನೀಡಲು ಮುಂದಾಗಿದೆ. ಅರ್ಜಿ ಆಹ್ವಾನಿಸಿದ್ದೇ ತಡ ಇದೀಗ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/05/2026 04:34 pm