ಚಳ್ಳಕೆರೆ ತಾಲೂಕಿನಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜೂನ್ ತಿಂಗಳ ಎರಡನೇ ವಾರದಿಂದ ಮುಂಗಾರು ಬಿತ್ತನೆ ಆರಂಭವಾಗುವುದು ವಾಡಿಕೆಯಾಗಿದೆ. ಈ ಭಾಗದಲ್ಲಿ ಮಳೆಯಾಶ್ರಿತ ಶೇಂಗಾ ಬಿತ್ತನೆ ಮಾಡುವ ರೈತರೇ ಹೆಚ್ಚಿದ್ದು, ಸಾಮಾನ್ಯವಾಗಿ ಸುಮಾರು 1.20 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಕಾರ್ಯ ನಡೆಯುತ್ತದೆ. ಇದರಲ್ಲಿ ಶೇ.70ರಷ್ಟು ಶೇಂಗಾ ಬೆಳೆಯನ್ನೇ ಬಿತ್ತಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಶೇಂಗಾ ಬಿತ್ತನೆ ಗಣನೀಯವಾಗಿ ಕುಂಠಿತಗೊಂಡಿದೆ.
ಕಳೆದ ವರ್ಷ ಕೇವಲ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಶೇಂಗಾ ಬಿತ್ತನೆ ಮಾಡಲಾಗಿತ್ತು. ಮಳೆಯ ಕೊರತೆಯಿಂದಾಗಿ ರೈತರು ಸಂಪೂರ್ಣ ಬೆಳೆ ನಷ್ಟ ಅನುಭವಿಸಿದರು. ಆದರೆ, ಇದಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರವಾಗಲಿ, ಬೆಳೆ ವಿಮೆಯಾಗಲಿ ಯಾವುದೂ ರೈತರಿಗೆ ತಲುಪಲಿಲ್ಲ. ಬೆಳೆ ಕಳೆದುಕೊಂಡು ಸಾಲಗಾರರಾಗಿರುವ ರೈತರಲ್ಲಿ ಶೇಂಗಾ ಬಿತ್ತನೆ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಮಳೆಯ ಕೊರತೆ, ಬೆಳೆ ವಿಮೆ ಪರಿಹಾರ ದೊರೆಯದಿರುವುದರಿಂದ ರೈತರು ಶೇಂಗಾ ಬಿತ್ತನೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ತೊಗರಿ ಮತ್ತು ಸಿರಿಧಾನ್ಯಗಳತ್ತ ಮುಖ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ರೈತರಾದ ರಾಮಣ್ಣ ಮತ್ತು ಶಿವಣ್ಣ ರಂಗಜ್ಜ, "ಮನೆ ಮಕ್ಕಳೆಲ್ಲ ಬೇಸಾಯದಲ್ಲಿ ತೊಡಗಿ, ದನಗಳನ್ನು ಬಳಸಿ ಬೇಸಾಯ ಮಾಡುತ್ತಿದ್ದಾಗ ಎಕರೆ ಲೆಕ್ಕದಲ್ಲಿ ಒಳ್ಳೆಯ ಇಳುವರಿ ಸಿಗುತ್ತಿತ್ತು. ಗ್ರಾಮದ ದೇವರುಗಳಿಗೆ ಪೂಜೆ ಮಾಡಿ, ಹೊಲದಲ್ಲಿ ಬಸವನಿಗೂ (ಎತ್ತುಗಳಿಗೆ) ಪೂಜೆ ಸಲ್ಲಿಸಿ ಬೇಸಾಯ ಮಾಡುತ್ತಿದ್ದೆವು. ಈಗ ಟ್ರ್ಯಾಕ್ಟರ್ ಬೇಸಾಯ ಬಂದಿದೆ. ಇದರಿಂದ ಭೂಮಿ ಸರಿಯಾಗಿ ಹದ ಆಗುವುದಿಲ್ಲ.
ಅಲ್ಲದೆ, ಕಡಲೆಕಾಯಿಯನ್ನು ಕೈಯಿಂದ ಸುಲಿಯದೆ, ಯಂತ್ರಗಳಿಗೆ ಹಾಕಿ ಸುಲಿಯುವುದರಿಂದ ಬೀಜಗಳು ಸರಿಯಾಗಿ ಹುಟ್ಟುವಳಿ ಆಗುತ್ತಿಲ್ಲ. ಹೀಗೆ, ಯಂತ್ರಗಳ ಬಳಕೆಯಿಂದ ಸಾಂಪ್ರದಾಯಿಕ ಕೃಷಿ ಬೆಳೆಗಳು ಕಣ್ಮರೆಯಾಗುತ್ತಿವೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Kshetra Samachara
24/05/2026 05:33 pm